ಜಿಐ ಟ್ಯಾಗ್ ಉತ್ಪನ್ನಗಳ ಬೆಳವಣಿಗೆಯಿಂದ ಆರ್ಥಿಕ ಸ್ವಾವಲಂಬನೆ

KannadaprabhaNewsNetwork |  
Published : Dec 06, 2025, 01:15 AM IST
1 | Kannada Prabha

ಸಾರಾಂಶ

ಜಿಐ ಟ್ಯಾಗ್ ಪಡೆದ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತೇಜನ ಮತ್ತು ಪ್ರಚಾರ ಅಗತ್ಯವಿದೆ. ಹೀಗಾಗಿ, ಈ ವಸ್ತುಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಕೇಂದ್ರ ಸರ್ಕಾರ ಕ್ರಮ.

ಕನ್ನಡಪ್ರಭ ವಾರ್ತೆ ಮೈಸೂರುಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ಉತ್ಪನ್ನಗಳ ಬೆಳವಣಿಗೆಯಿಂದ ಸ್ಥಳೀಯ ಉದ್ಯೋಗ, ಸಾಂಪ್ರದಾಯಿಕ ಜ್ಞಾನದ ರಕ್ಷಣೆ, ಕೌಶಲ ಸಂರಕ್ಷಣೆಗೂ ಸಹಕಾರಿಯಾಗಲಿದೆ. ಅಲ್ಲದೆ, ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹ ಅನುಕೂಲ ಎಂದು ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ ತಿಳಿಸಿದರು.ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (ಸಿ.ಎಫ್.ಟಿ.ಆರ್‌.ಐ) ಆವರಣದಲ್ಲಿ ಮಧುರೈ ಅಗ್ರಿ ಬಿಸಿನೆಸ್ ಇನ್ಕ್ಯುಬೇಷನ್ ಫೋರಂ (ಎಂಎಬಿಐಎಫ್), ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್), ತಮಿಳುನಾಡು ಕೃಷಿ ವಿವಿ ಸಹಯೋಗದಲ್ಲಿ ಶುಕ್ರವಾರದಿಂದ ಆಯೋಜಿಸಿರುವ 4 ದಿನಗಳ ಜಿಐ ಮಹೋತ್ಸವ 3.0 ಅನ್ನು ಅವರು ಉದ್ಘಾಟಿಸಿ ಮಾತನಾಡಿದರು.ಜಿಐ ಟ್ಯಾಗ್ ಪಡೆದ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ತೇಜನ ಮತ್ತು ಪ್ರಚಾರ ಅಗತ್ಯವಿದೆ. ಹೀಗಾಗಿ, ಈ ವಸ್ತುಗಳ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲು ಕೇಂದ್ರ ಸರ್ಕಾರ ಕ್ರಮ ವಹಿಸಿದ್ದು, ಇಂಗ್ಲೆಂಡ್, ಯುಎಇ, ಗಲ್ಫ್ ರಾಷ್ಟ್ರಗಳು, ಇಟಲಿ, ಜರ್ಮನಿ ದೇಶದಲ್ಲಿ ಜಿಐ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದರು.ಜಿಐ ಟ್ಯಾಗ್ ಒಂದು ಪ್ರದೇಶದ ವಿಶಿಷ್ಟ ಉತ್ಪನ್ನಕ್ಕೆ ಸಿಗುವ ಗುರುತಾಗಿದ್ದು, ಅದು ಆ ಉತ್ಪನ್ನದ ನಿಜವಾದ ಮೂಲ ಮತ್ತು ಗುಣಮಟ್ಟವನ್ನು ಖಚಿತ ಪಡಿಸುತ್ತದೆ. ವಿಶೇಷ ಉತ್ಪನ್ನಗಳ ಗುಣಲಕ್ಷಣವನ್ನು ಪ್ರಮಾಣೀಕರಿಸುತ್ತದೆ. ನಿರ್ದಿಷ್ಟ ಪ್ರದೇಶದ ಸಂಕೇತವಾಗಿರುವ ಜಿಐ ಟ್ಯಾಗ್ ಉತ್ಪನ್ನಗಳು ವಿಶೇಷ ಗುಣ, ವೈಶಿಷ್ಟತೆ ಹೊಂದಿರುತ್ತವೆ. ಭೌಗೋಳಿಕ ಮೂಲವನ್ನು ಸೂಚಿಸುವ ಆ ಉತ್ಪನ್ನಗಳ ನಕಲಿ ಉತ್ಪನ್ನಗಳ ಮಾರಾಟ ತಡೆಯುತ್ತದೆ. ಸ್ಥಳೀಯ ಕುಶಲಕರ್ಮಿಗಳು, ರೈತರಿಗೆ ಕಾನೂನು ರಕ್ಷಣೆ ನೀಡಿ, ಅವರ ಆರ್ಥಿಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಿಐ ಟ್ಯಾಗ್ ಪ್ರೋತ್ಸಾಹಿಸುತ್ತದೆ ಎಂದು ಅವರು ಹೇಳಿದರು.ಗ್ರಾಹಕರಿಗೆ ಜಿಐ ಟ್ಯಾಗ್ ಉತ್ಪನ್ನಗಳು ಸುಲಭವಾಗಿ ದೊರೆಯುವಂತೆ ಮಾಡಲು ಇ-ಕಾಮರ್ಸ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇದರಿಂದಾಗಿ ತ್ವರಿತಗತಿಯಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಗತಿ ಹೊಂದಲು ನೆರವಾಗಲಿದೆ ಎಂದರು.ಚೀನಾ ಮುಂಚೂಣಿ: ಕೊಯಮತ್ತೂರಿನ ತಮಿಳುನಾಡು ಕೃಷಿ ವಿವಿ ಕೃಷಿ ವ್ಯಾಪಾರ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಈ. ಸೋಮಸುಂದರಂ ಮಾತನಾಡಿ, ಭೌಗೋಳಿಕ ಮಾನ್ಯತೆ ಪಡೆಯುವಲ್ಲಿ ಚೀನಾ ದೇಶವೇ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ಇದೆ. 9700 ಜಿಐ ಟ್ಯಾಗ್ ಉತ್ಪನ್ನಗಳನ್ನು ಅದು ನೋಂದಾಯಿಸಿದೆ. ನಂತರ ಸ್ಥಾನದಲ್ಲಿರುವ ಜರ್ಮನಿ ಮತ್ತು ಹಂಗೇರಿ ದೇಶದಲ್ಲಿ ಅಂದಾಜು 7 ಸಾವಿರ ಜಿಐ ಟ್ಯಾಗ್ ಉತ್ಪನ್ನಗಳಿವೆ. ಇವುಗಳಿಗೆ ಹೋಲಿಸಿದರೇ ಭಾರತ ಬಹಳಷ್ಟು ಹಿಂದುಳಿದಿದೆ ಎಂದು ತಿಳಿಸಿದರು.ಜಿಐ ಉತ್ಪನ್ನಗಳ ಮೂಲಕ ಆಹಾರ ಪ್ರವಾಸೋದ್ಯಮವನ್ನೂ ಉತ್ತೇಜಿಸಬಹುದಾಗಿದೆ. ವಿದೇಶಿಯರಿಗೆ ಭಾರತೀಯ ಆಹಾರ ಪದಾರ್ಥಗಳು ಬಹಳ ಅಚ್ಚುಮೆಚ್ಚು. ಜಿಐ ಖಾದ್ಯಗಳು ಬೇರೆ ದೇಶಗಳಲ್ಲಿ ಸಿಗಲ್ಲ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಇಂತಹ ಆಹಾರ ಪದಾರ್ಥಗಳ ರುಚಿ ಸವಿಯಲು ಅವಕಾಶ ಕಲ್ಪಿಸಿಕೊಡುವ ಮೂಲಕ ಆರ್ಥಿಕ ಮೂಲವನ್ನು ಕಂಡುಕೊಳ್ಳಬೇಕಿದೆ ಎಂದರು.ಮಧುರೈ ಕೃಷಿ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ.ಪಿ.ಪಿ. ಮಹೇಂದ್ರನ್ ಮಾತನಾಡಿ, ಭೌಗೋಳಿಕ ಸೂಚ್ಯಂಕ ನೋಂದಣಿಯಾಗಿರುವ ಉತ್ಪನ್ನಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಅದರಲ್ಲೇ ಸುಸ್ಥಿರ ಪ್ರಗತಿಯನ್ನೂ ಕಾಣಬೇಕಿದೆ. ಜಿಐ ಉತ್ಪನ್ನಗಳಿಗೆ ಸಂಬಂಧಿಸಿದಂತೆ ನವೋದ್ಯಮ ಪ್ರಾರಂಭ, ಅವುಗಳ ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕ- ಬಲವರ್ಧನೆ ಮತ್ತು ಬೌದ್ಧಿಕ ಆಸ್ತಿ ರಕ್ಷಣೆಯೆಲ್ಲ ಒಟ್ಟಿಗೆ ಸಾಗಬೇಕಿದೆ ಎಂದು ಹೇಳಿದರು.ಇದೇ ವೇಳೆ ಎಂಎಬಿಐಎಫ್ ಮತ್ತು ಸಿ.ಎಫ್.ಟಿ.ಆರ್‌.ಐ ನಡುವೆ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಯಿತು. ಅಲ್ಲದೆ ವಿವಿಧ ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು.ಐಐಪಿಎಂ ನಿರ್ದೇಶಕ ಡಾ.ಎಸ್. ಸೆಂಥಿಲ್ ವಿನಾಯಗಂ, ನಬಾರ್ಡ್‌ಸಿಇಒ ಕೆ. ಗಣೇಶ್‌ ಮೂರ್ತಿ, ಸಿಜಿಎಂ ಸುರೇಂದ್ರ ಬಾಬು, ಸಿ.ಎಫ್.ಟಿ.ಆರ್‌.ಐ ಮುಖ್ಯ ವಿಜ್ಞಾನಿಗಳಾದ ಡಾ. ಆಶಿತೋಷ್ ಇನಾಮ್ದಾರ್, ಡಾ.ಡಿ. ಉಷಾರಾಣಿ ಮೊದಲಾದವರು ಇದ್ದರು.----ಕೋಟ್...ಭಾರತದಲ್ಲಿ ನೋಂದಾಯಿಸಲಾದ ಜಿಐ ಉತ್ಪನ್ನಗಳ ಸಂಖ್ಯೆ ಅಂದಾಜು 650 ಆಗಿದೆ. ಈ ಪೈಕಿ 340 ಕರಕುಶಲ ಉತ್ಪನ್ನಗಳು, 18 ಉತ್ಪಾದನಾ ವಸ್ತುಗಳು, 45 ಆಹಾರ ಉತ್ಪನ್ನಗಳು, 190 ಕೃಷಿ ಸಂಬಂಧಿಸಿದ ಉತ್ಪನ್ನಗಳಾಗಿವೆ. 74 ಜಿಐ ಟ್ಯಾಗ್ ಉತ್ಪನ್ನಗಳೊಂದಿಗೆ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ತಮಿಳುನಾಡು 60 ಉತ್ಪನ್ನಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ನಂತರ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 46 ಭೌಗೋಳಿಕ ಸೂಚ್ಯಂಕ ಉತ್ಪನ್ನಗಳಿವೆ.- ಡಾ. ಗಿರಿಧರ್ ಪರ್ವತಂ, ನಿರ್ದೇಶಕ, ಸಿ.ಎಫ್.ಟಿ.ಆರ್‌.ಐ----ಬಾಕ್ಸ್... ಜಿಐ ಉತ್ಪನ್ನಗಳ ಪ್ರದರ್ಶನಜಿಐ ಮಹೋತ್ಸವ ಅಂಗವಾಗಿ 56 ಮಳಿಗೆಗಳಲ್ಲಿ ವಿವಿಧ ಜಿಐ ಟ್ಯಾಗ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ.ಗುಲ್ಬರ್ಗಾ ತೋಗರಿ ಬೇಳೆ, ಇಂಡಿ ನಿಂಬೆ, ನಂಜನಗೂಡು ರಸಬಾಳೆ, ಮೈಸೂರು ಮಲ್ಲಿಗೆ, ಮೈಸೂರು ವೀಳ್ಯದೆಲೆ, ಬ್ಯಾಡಗಿ ಮೆಣಸಿನಕಾಯಿ, ಕೂರ್ಗ್ ಆರೆಂಜ್, ಕರ್ನಾಟಕ ಕರಕುಶಲ ವಸ್ತುಗಳು, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ಚಿತ್ರಕಲೆಗಳು, ಮೈಸೂರಿನ ಗಂಜಿಫಾ ಕಾರ್ಡ್‌ ಗಳು, ಚನ್ನಪಟ್ಟಣ ಆಟಿಕೆಗಳು ಮತ್ತು ಗೊಂಬೆಗಳು, ಮೈಸೂರು ರೋಸ್ ವುಡ್ ಇನ್ಲೇ, ಉಡುಪಿ ಸೀರೆಗಳು, ಮೈಸೂರು ಅಗರಬತ್ತಿ, ಧಾರವಾಡ ಪೇಡಾ ಸೇರಿದಂತೆ ವೈವಿಧ್ಯಮಯ ಜಿಐ ಟ್ಯಾಗ್ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಈ ಪ್ರದರ್ಶನವು ಡಿ.8 ರವರೆಗೆ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯಲಿದೆ.

- ಸಿಎಫ್‌ಟಿಆರ್‌ಐ ನಿರ್ದೇಶಕ ಡಾ. ಗಿರಿಧರ್ ಪರ್ವತಂ- 4 ದಿನಗಳ ಜಿಐ ಮಹೋತ್ಸವ 3.0 ಉದ್ಘಾಟನೆಫೋಟೋ- 5ಎಂವೈಎಸ್1ಮೈಸೂರಿನ ಸಿ.ಎಫ್.ಟಿ.ಆರ್‌.ಐ ಆವರಣದಲ್ಲಿ ಆಯೋಜಿಸಲಾಗಿರುವ ಜಿಐ ಮಹೋತ್ಸವ 3.0 ಅನ್ನು ನಿರ್ದೇಶಕ ಡಾ. ಗಿರಿಧರ್ ಪರ್ವತಂ ಉದ್ಘಾಟಿಸಿದರು.5ಎಂವೈಎಸ್2ಜಿಐ ಮಹೋತ್ಸವದಲ್ಲಿ ಅತಿಥಿ ಗಣ್ಯರು ನಂಜನಗೂಡು ರಸಬಾಳೆ ವೀಕ್ಷಿಸಿದರು.5ಎಂವೈಎಸ್3ಜಿಐ ಮಹೋತ್ಸವದಲ್ಲಿ ಎಂಎಬಿಐಎಫ್ ಮತ್ತು ಸಿ.ಎಫ್.ಟಿ.ಆರ್‌.ಐ ನಡುವೆ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಯಿತು.----

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆ ಕಟಾವು ಪ್ರಯೋಗ ನಿರ್ಲಕ್ಷಿಸಿದರೆ ಕಠಿಣ ಕ್ರಮ
ಬೆಮಲ್ ನಲ್ಲಿ ಮತ್ತೆ ಹುಲಿ ಪ್ರತ್ಯಕ್ಷ- ಆತಂಕ