ವಿರೋಧಿಗಳ ಹತ್ತಿಕ್ಕಲೆಂದೇ ಕೇಂದ್ರದಿಂದ ಇ.ಡಿ ದಾಳಿ

KannadaprabhaNewsNetwork | Published : Oct 7, 2023 2:19 AM

ಸಾರಾಂಶ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನೆಗಳ ಮೇಲೆ ಗುರುವಾರ ನಡೆದಿರುವ ಜಾರಿ ನಿರ್ದೆಶನಾಲಯದ ದಾಳಿ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಅವರ ಮನೆಗಳ ಮೇಲೆ ನಡೆದಿರುವ ದಾಳಿ ಲೋಕಸಭಾ ಚುನಾವಣೆ ಹಿನ್ನೆಲೆ ವಿರೋಧಿಗಳನ್ನು ಹತ್ತಿಕ್ಕಲು ಹಮ್ಮಿಕೊಂಡಿರುವ ಕೇಂದ್ರ ಸರ್ಕಾರದ ತಂತ್ರಗಾರಿಕೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡರ ಮನೆಗಳ ಮೇಲೆ ಗುರುವಾರ ನಡೆದಿರುವ ಜಾರಿ ನಿರ್ದೆಶನಾಲಯದ ದಾಳಿಯನ್ನು ಖಂಡಿಸಿ ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಮತ್ತು ಸಹಕಾರಿ ಕ್ಷೇತ್ರದ ಪ್ರಮುಖರು ನಡೆಸಿದ ಪ್ರತಿಭಟನೆ ನೇತೃತ್ವವನ್ನು ವಹಿಸಿ, ತಾಲೂಕು ಕಚೇರಿ ಎದುರು ಸಭೆಯಲ್ಲಿ ಅವರು ಮಾತನಾಡಿದರು. ಮಂಜುನಾಥಗೌಡರ ಮೇಲಿದ್ದ ಪ್ರಕರಣಗಳ ತನಿಖೆ ಈಗಾಗಲೇ ಮುಗಿದಿದೆ. ಆದರೂ ಸ್ಥಳೀಯ ಶಾಸಕರ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ. ಇ.ಡಿ, ಸಿಬಿಐ ಮುಂತಾದ ಇಲಾಖೆಗಳನ್ನು ರಾಜಕೀಯ ದುರುದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಧೀನದ ಈ ಸಂಸ್ಥೆಗಳನ್ನು ವಿರೋಧ ಪಕ್ಷಗಳ ಮೇಲೆ ಛೂ ಬಿಟ್ಟು ಕಿರುಕುಳ ನೀಡುತ್ತಿದೆ ಎಂದೂ ಆಪಾದಿಸಿದರು. ಬಿಜೆಪಿಯೇ ಕಾರಣ: ಶಿವಮೊಗ್ಗದಲ್ಲಿ ಶಾಂತಿ ನೆಲೆಸಲು ಬಿಡದ ಬಿಜೆಪಿ ಮುಖಂಡರು ಬೆಂಕಿ ಹಚ್ಚುವ ಸಲುವಾಗಿಯೇ ಸತ್ಯಶೋಧನಾ ಸಮಿತಿ ಹೆಸರಿನಲ್ಲಿ ರಾಗಿಗುಡ್ಡಕ್ಕೆ ಹೋಗಿರುವುದು. ಅಲ್ಲಿ ನಡೆದಿರುವ ಎಲ್ಲ ಕೋಮು ಗಲಭೆಗಳಿಗೂ ಬಿಜೆಪಿಯವರೇ ಕಾರಣ ಎಂದು ಟೀಕಿಸಿದರು. ಆರಗ ಜ್ಞಾನೇಂದ್ರಗೆ ಎಚ್ಚರಿಕೆ: ಕ್ಷೇತ್ರದಲ್ಲಿ ಕೆಲಸವನ್ನೇ ಮಾಡದೇ ನೂರಾರು ಕೋಟಿ ರು. ಬಿಲ್ ಮಾಡಲಾಗಿದೆ. ₹70 ಕೋಟಿ ವೆಚ್ಚ ಮಾಡಿ, ಈ ಬಾರಿ ಚುನಾವಣೆ ಗೆದ್ದಿದ್ದಾರೆ. ಬಿಜೆಪಿಯೇತರರಿಗೆ ಸದಾ ತೊಂದರೆ ಕೊಡುವ ಶಾಸಕ ಆರಗ ಜ್ಞಾನೇಂದ್ರ ತಮ್ಮ ಮಗನ ಹೆಸರಿನಲ್ಲಿ ಖರೀದಿಸಿರುವ ಮಠದ ಜಮೀನಿನ ವಿಚಾರಕ್ಕೆ ಸಂಬಂಧಿಸಿ ತಾಲೂಕು ಕಚೇರಿಯ ಅನ್ಯ ಕೋಮಿನ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಸಿದ್ದಾರೆ. ಆಕೆಗೆ ತೊಂದರೆಯಾದರೆ ಹುಷಾರ್ ಎಂದು ಎಚ್ಚರಿಸಿದ ಕಿಮ್ಮನೆ, ಖರೀದಿಸಿದ ಮಠದ ಭೂಮಿ ಜೊತೆಗೆ ಸರ್ಕಾರಿ ಭೂಮಿಯನ್ನೂ ಕಬಳಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯೂ ಆಗಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಇ.ಡಿ, ಸಿಬಿಐ ಇಲಾಖೆಯವರನ್ನು ಕೂಲಿಯಾಳುಗಳಂತೆ ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಕೀಳುಮಟ್ಟದ ರಾಜಕಾರಣಕ್ಕೆ ಮುಂದಾಗಿದೆ ಎಂದು ದೂರಿದರು. ಪಕ್ಷದ ಕಾರ್ಯಾಲಯ ಗಾಂಧಿ ಭವನದಿಂದ ಹೊರಟು ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಭಟನಾ ಸಭೆ ನಂತರ ಶಿರಸ್ತೇದಾರರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಪಕ್ಷದ ಎರಡೂ ಘಟಕಗಳ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್ ಹಾಗೂ ಮುಡುಬಾ ರಾಘವೇಂದ್ರ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ರಾಮಚಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಪಿ.ರಾಘವೇಂದ್ರ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಪಪಂ ಸದಸ್ಯೆ ಸುಶೀಲಾ ಶೆಟ್ಟಿ, ಪ್ರಮುಖರಾದ ಡಿ.ಎಸ್.ವಿಶ್ವನಾಥ ಶೆಟ್ಟಿ, ಕಟ್ಟೆಹಕ್ಕಲು ಕಿರಣ್, ನಾಬಳ ಶಚ್ಚೀಂದ್ರ ಹೆಗ್ಡೆ ಮುಂತಾದವರು ಇದ್ದರು. - - - -06ಟಿಟಿಎಚ್01: ಪ್ರತಿಭಟನಾ ಸಭೆಯಲ್ಲಿ ಕಿಮ್ಮನೆ ರತ್ನಾಕರ್ ಮಾತನಾಡಿದರು.

Share this article