ಕನ್ನಡಪ್ರಭ ವಾರ್ತೆ ಶಿವಮೊಗ್ಗ ಓದಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಕ್ರೀಡೆಗಳಿಗೂ ನೀಡಬೇಕು. ಪ್ರಸ್ತುತ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಆಸಕ್ತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ತು ಶಾಸಕ ಡಿ.ಎಸ್.ಅರುಣ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಕ್ರೀಡಾ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 2023-24ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಐದು ವರ್ಷಗಳಲ್ಲಿ ದೇಶದ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಬೆಳೆವಣಿಗೆಯಾಗಿದೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದ ಖೇಲೋ ಇಂಡಿಯಾ ಎಂಬ ಪರಿಕಲ್ಪನೆಯಡಿ ಮುಂದಿನ ಒಲಂಪಿಕ್ಸ್ ಕ್ರೀಡೆಗೆ ಈಗಲೇ ಕ್ರೀಡಾಪಟುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು. ಸರ್ಕಾರದ ದೂರದೃಷ್ಟಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಬೆಳೆವಣಿಗೆಯಾಗುತ್ತಿದ್ದು, ಪ್ರತಿಭಾವಂತ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ. ನಮ್ಮ ಕ್ರೀಡಾಪಟುಗಳು ಏಷ್ಯನ್ ಕ್ರೀಡೆಗಳಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದ್ದಾರೆ. ಇಂದಿಗೆ 23 ಚಿನ್ನದ ಪದಕ ಸೇರಿದಂತೆ ಒಟ್ಟು 88 ಪದಕಗಳನ್ನು ಪಡೆದಿರುವುದು ಹೆಮ್ಮೆಯ ವಿಷಯ ಎಂದರು. ಎನ್‍ಇಪಿ ಅಡಿಯಲ್ಲಿ ಓದಿನ ಜೊತೆಗೆ ನಮಗೆ ಕ್ರೀಡೆ, ಕಲೆ, ಸಾಹಿತ್ಯ ಹೀಗೆ ಆಸಕ್ತಿ ಇರುವಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ವಿದ್ಯಾರ್ಥಿಗಳು ತಮ್ಮದೇ ಆದ ದೂರದೃಷ್ಟಿ, ಗುರಿ ಹೊಂದಬೇಕು. ಸೋಲನ್ನು ಸವಾಲಾಗಿ ಸ್ವೀಕರಿಸಿ, ಮುಂದೆ ಬರಬೇಕು. ಶಿವಮೊಗ್ಗದಲ್ಲೂ ಕ್ರೀಡಾ ವಲಯ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಕ್ರಿಕೆಟ್ ಮೈದಾನ, ಸಾಕಷ್ಟು ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ ಹೀಗೆ ಅಭಿವೃದ್ದಿಗಳು ಆಗುತ್ತಿವೆ. ಒಳ್ಳೆಯ ಅವಕಾಶ ಮತ್ತು ವೇದಿಕೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ಶಿವಮೊಗ್ಗದಲ್ಲಿ ಏರ್ಪಡಿಸಲಾಗಿದೆ. ಪ್ರತಿ ವಿಭಾಗ ಮಟ್ಟಕ್ಕೂ ವಿವಿಧ ಕ್ರೀಡೆಗಳನ್ನು ನೀಡಲಾಗಿದೆ. ಈ ವಿಭಾಗಕ್ಕೆ ಟೆನ್ನಿಸ್, ಜುಡೋ, ಯೋಗ, ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್ ಒಟ್ಟು 5 ಕ್ರೀಡೆಗಳನ್ನು ನೀಡಲಾಗಿದೆ. 650 ಕ್ರೀಡಾಪಟುಗಳು ನೋಂದಣಿಯಾಗಿದ್ದಾರೆ. ಇಲ್ಲಿ ಆಯ್ಕೆಯಾದವರು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು ಎಂದರು. ಕಾರ್ಯಕ್ರಮದಲ್ಲಿ ತರಬೇತುದಾರರಾದ ನಾಗರಾಜ್, ಬಾಳಪ್ಪ ಮಾನೆ, ಕೇಶವನ್ ಮತ್ತು ಶ್ರೀಕಾಂತ್ ಇವರನ್ನು ಸನ್ಮಾನಿಸಲಾಯಿತು. ತರಬೇತುದಾರರಾದ ನಾಗರಾಜ್, ಜಮಾಲ್ ಅಹಮದ್, ಬಾಳಪ್ಪ ಮಾನೆ, ಕ್ರೀಡಾಪಟುಗಳು ಹಾಜರಿದ್ದರು. - - - -6ಎಸ್‌ಎಂಜಿಕೆಪಿ01: ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 2023-24 ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗಮಟ್ಟದ ದಸರಾ ಕ್ರೀಡಾಕೂಟವನ್ನು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಬಲೂನುಗಳನ್ನು ಹಾರಿಬಿಡುವ ಮೂಲಕ ಉದ್ಘಾಟಿಸಿದರು.