6 ತಾಸು ಡಿಕೆಸು ವಿಚಾರಣೆ ನಡೆಸಿದ ಇ.ಡಿ

KannadaprabhaNewsNetwork |  
Published : Jun 24, 2025, 12:32 AM ISTUpdated : Jun 24, 2025, 09:42 AM IST
ಡಿ.ಕೆ.ಸುರೇಶ್ | Kannada Prabha

ಸಾರಾಂಶ

ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡ ಜತೆಗಿನ ಹಣಕಾಸು ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ)ವು ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಮವಾರ ಸುಮಾರು ಆರು ಗಂಟೆಗಳಷ್ಟು ಸುದೀರ್ಘ ವಿಚಾರಣೆ ನಡೆಸಿದೆ. ಬಳಿಕ ಮುಂದಿನ ಜು.8ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದೆ.

 ಬೆಂಗಳೂರು :  ವಂಚನೆ ಆರೋಪ ಹೊತ್ತಿರುವ ಐಶ್ವರ್ಯಗೌಡ ಜತೆಗಿನ ಹಣಕಾಸು ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ)ವು ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಸೋಮವಾರ ಸುಮಾರು ಆರು ಗಂಟೆಗಳಷ್ಟು ಸುದೀರ್ಘ ವಿಚಾರಣೆ ನಡೆಸಿದೆ. ಬಳಿಕ ಮುಂದಿನ ಜು.8ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ಸೂಚಿಸಿದೆ.

ವಿಚಾರಣೆ ವೇಳೆ ಐಶ್ವರ್ಯಗೌಡ ಅವರ ಜತೆ ಯಾವುದೇ ಹಣಕಾಸಿನ ವ್ಯವಹಾರ ಮಾಡಿಲ್ಲ. ಆಕೆಯ ವಂಚನೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಸುರೇಶ್ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಕಳೆದ ಮೂರು ವರ್ಷಗಳ ಬ್ಯಾಂಕ್ ವಹಿವಾಟಿನ ವಿವರಗಳ ಸಮೇತ ಆಗಮಿಸಿದ್ದ ಸುರೇಶ್ ಅವರು ಎಲ್ಲವನ್ನೂ ಇ.ಡಿ ಅಧಿಕಾರಿಗಳಿಗೆ ತೋರಿಸಿದರು. ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು ಎಂದು ಮೂಲಗಳು ತಿಳಿಸಿವೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, ಬೆಳಗ್ಗೆ 11 ರಿಂದ 6ರವರೆಗೆ ಇ.ಡಿ ವಿಚಾರಣೆ ಹಾಜರಾಗಿದ್ದೆ. ಇ.ಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ ಎಂದರು.

ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಜೊತೆ ಪರಿಚಯ ಇದೆ ಎಂಬುದಾಗಿ ಹೇಳಿ‌ ಕೆಲವರು ಹಣ ಕಳೆದುಕೊಂಡಿದ್ದಾರೆ. ಹಣ ಕಳೆದುಕೊಂಡವರು ಕೂಡ ವಿಚಾರಣೆ ವೇಳೆ ನನ್ನ ಹೆಸರು ಹೇಳಿ ಹಣ ಪಡೆದ ಬಗ್ಗೆ ದಾಖಲೆ ಕೊಟ್ಟಿದ್ದರು. ಈ ಬಗ್ಗೆ ಎಲ್ಲ ಪ್ರಶ್ನೆಗಳನ್ನು ಇ.ಡಿ ಅಧಿಕಾರಿಗಳು ಕೇಳಿದರು ಎಂದು ತಿಳಿಸಿದರು.

ಐಶ್ವರ್ಯಗೌಡಗೂ ನನಗೂ ಪರಿಚಯ ಇರಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರಿಂದ ಹೋಗಿದ್ದೆ. ಅವರ ಯಾವುದೇ ವ್ಯವಹಾರದ ಬಗ್ಗೆ ನನಗೆ ಗೊತ್ತಿಲ್ಲ. ಮತ್ತೆ ಮುಂದಿನ ಜು.8ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇನೆ. ಕಾನೂನು ಪಾಲನೆ, ತನಿಖೆಗೆ ಸಹಕಾರ ಕೊಡಬೇಕಾದದ್ದು ನನ್ನ ಕರ್ತವ್ಯ ಎಂದು ಹೇಳಿದರು.

ಇ.ಡಿ ಅಧಿಕಾರಿಗಳ ವಿರುದ್ಧ ಕಿಡಿ

ಇದೇ ವೇಳೆ ಡಿ.ಕೆ.ಸುರೇಶ್ ಅವರು ಇ.ಡಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಪ್ರಸಂಗವೂ ನಡೆಯಿತು. ಇ.ಡಿ ಅಧಿಕಾರಿಗಳು ಬೆಳಗ್ಗೆ 11ಗಂಟೆಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದರು. ಸುರೇಶ್ ಅವರು 11.15ಕ್ಕೆ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಭೇಟಿ ನೀಡಿದರು. ತಡವಾಗಿ ಬಂದಿದ್ದರಿಂದಲೋ ಏನೋ ಅಧಿಕಾರಿಗಳು ಕಚೇರಿ ಪ್ರವೇಶ ಭಾಗದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಬಳಿಕ ರಿಜಿಸ್ಟರ್‌ನಲ್ಲಿ ಸಹಿ ಮಾಡುವಂತೆ ನಿರ್ದೇಶನ ನೀಡಿದರು. ಸಹಿ ಮಾಡಿದ ಬಳಿಕವೂ ಒಳ ಹೋಗಲು ಕೆಲಕಾಲ ಅವಕಾಶ ಕೊಡಲಿಲ್ಲ. ಇದರಿಂದ ಆಕ್ರೋಶಗೊಂಡ ಸುರೇಶ್ ಅವರು ಏರು ಧ್ವನಿಯಲ್ಲೇ ಅಸಮಾಧಾನ ಹೊರಹಾಕಿದರು ಎಂದು ಮೂಲಗಳು ತಿಳಿಸಿವೆ.

ಡಿಕೆಸು ಹೆಸರಲ್ಲಿ ವಂಚಿಸಿದ್ದ ₹3.98 ಕೋಟಿ ಇ.ಡಿ ಜಪ್ತಿ:

ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರಿನಲ್ಲಿ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾಗೌಡ ಹಾಗೂ ಇತರ ಆರೋಪಿಗಳ ₹3.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.ಐಶ್ವರ್ಯಗೌಡಳ ಗ್ಯಾಂಗ್‌ಗೆ ಸೇರಿದ ಫ್ಲ್ಯಾಟ್‌ಗಳು, ಕಟ್ಟಡ ಹಾಗೂ ಜಮೀನು ಸೇರಿ ₹2.01 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ನಗದು ಹಣ ಮತ್ತು ವಾಹನಗಳು ಸೇರಿ ₹1.97 ಕೋಟಿ ಮೌಲ್ಯದ ಚರಾಸ್ತಿ ಸೇರಿ ಒಟ್ಟು ₹3.98 ಕೋಟಿ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಜಿ ಸಂಸದ ಸುರೇಶ್‌ ಅವರ ಸೋದರಿ ಸೋಗಿನಲ್ಲಿ ಜನರಿಗೆ ಕೋಟ್ಯಂತರ ರುಪಾಯಿ ವಂಚಿಸಿದ ಆರೋಪದ ಮೇರೆಗೆ ಐಶ್ವರ್ಯಗೌಡಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ವಂಚನೆ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಆಕೆಯನ್ನು ಇ.ಡಿ ಬಂಧಿಸಿತ್ತು.ವಿಚಾರಣೆಗೆ ಕುಟುಂಬ ಯಾವತ್ತೂ ಸಿದ್ಧ: ಡಿಕೆಶಿ

ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆ ಎದುರಿಸಲು ನಮ್ಮ ಕುಟುಂಬ ಸದಾ ಸಿದ್ಧವಿದೆ. ಯಾರದ್ದೋ ಹೇಳಿಕೆ ಮೇಲೆ ಡಿ.ಕೆ.ಸುರೇಶ್‌ ಅವರನ್ನು ವಿಚಾರಣೆಗೆ ಕರೆದಿದ್ದಾರೆ. ಅದನ್ನು ಮಾಧ್ಯಮಗಳು ವೈಭವೀಕರಿಸುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.ಸದಾಶಿವನಗರದ ತಮ್ಮ ನಿವಾಸದ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಈ ಹಿಂದೆ ನನ್ನ ಮೇಲೂ ಇ.ಡಿ ಪ್ರಕರಣ ದಾಖಲಾಗಿತ್ತು. ಅದು ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನಮ್ಮ ರಕ್ಷಣೆಗೆ ಯಾರೂ ಬರಲಿಲ್ಲ. ಕೊನೆಗೆ ನಮಗೆ ನ್ಯಾಯಾಂಗ ವ್ಯವಸ್ಥೆ ರಕ್ಷಣೆ ನೀಡಿತು. ಇ.ಡಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಡಿ.ಕೆ. ಸುರೇಶ್‌ ತಯಾರಿದ್ದಾರೆ. ಮಾಧ್ಯಮಗಳು ಹೆಚ್ಚು ಆದ್ಯತೆ ನೀಡಬೇಕಾದ ಪ್ರಕರಣಗಳನ್ನು ಬಿಟ್ಟು, ಈ ಪ್ರಕರಣಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿಲ್ಲ ಎಂದರು.

ವಸತಿ ಯೋಜನೆ ಅಡಿ ಮನೆ ಪಡೆಯಲು ಹಣ ನೀಡಬೇಕು ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿ, ಈ ವಿಚಾರವಾಗಿ ನಾನು ಈಗಾಗಲೇ ಹೇಳಿಕೆ ನೀಡಿದ್ದೇನೆ. ಏನು ಹೇಳಬೇಕೋ ಅದನ್ನು ತಿಳಿಸಿದ್ದೇನೆ. ಉಳಿದಂತೆ ಈ ವಿಚಾರವಾಗಿ ಮುಖ್ಯಮಂತ್ರಿ ಅವರು ಮತ್ತು ವಸತಿ ಸಚಿವರು ಸ್ಪಷನೆ ನೀಡುತ್ತಾರೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ