ಕನ್ನಡಪ್ರಭ ವಾರ್ತೆ ಬೆಂಗಳೂರುಬಹುಕೋಟಿ ಮೊತ್ತದ ಬಿಟ್ ಕಾಯಿನ್ ಹಗರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಮೂರನೇ ಬಾರಿ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ಜಾರಿ ಮಾಡಿದೆ.
ವಿಚಾರಣೆಗೆ ಗೈರಾದರೆ ಬಂಧನ ಭೀತಿ?:ಬಿಟ್‌ಕಾಯಿನ್ ಪ್ರಕರಣದ ಸಂಬಂಧ ಇ.ಡಿ. ಅಧಿಕಾರಿಗಳು ಈಗಾಗಲೇ ಮೊಹಮ್ಮದ್ ನಲಪಾಡ್‌ಗೆ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ, ಸರ್ಕಾರ ರಚನೆ ಸೇರಿ ಹತ್ತಾರು ರಾಜಕೀಯ ನೆಪಗಳನ್ನು ಹೇಳಿ ನಲಪಾಡ್ ವಿಚಾರಣೆಯಿಂದ ನುಣುಚಿಕೊಂಡಿದ್ದರು.
ಆದರೆ ಈ ಬಾರಿ ಇ.ಡಿ. ಕಠಿಣ ನಿಲುವು ತಳೆದಿದ್ದು, 3ನೇ ಬಾರಿ ಖುದ್ದು ವಿಚಾರಣೆಗೆ ಹಾಜರಾಗಲೇಬೇಕು ಎಂದು ಕಟ್ಟುನಿಟ್ಟಿನ ಕೊನೆಯ ನೋಟಿಸ್ ನೀಡಿದೆ. ಒಂದು ವೇಳೆ ಈ ಬಾರಿಯೂ ನಲಪಾಡ್ ವಿಚಾರಣೆಗೆ ಗೈರಾದರೆ, ಇ.ಡಿ. ಅಧಿಕಾರಿಗಳು ತನಿಖೆಗೆ ಅಸಹಕಾರ ತೋರಿದ ಆಧಾರದ ಮೇಲೆ ನಲಪಾಡ್‌ನನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಥವಾ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.ನಲಪಾಡ್ ಮೇಲೆ ಇರುವ ಆರೋಪವೇನು?:ಮೊಹಮ್ಮದ್ ನಲಪಾಡ್ ಮೇಲೆ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯಿಂದ ಬಿಟ್‌ಕಾಯಿನ್‌ಗಳನ್ನು ಹವಾಲಾ ಮೂಲಕ ನಗದೀಕರಣ ಮಾಡಿಕೊಟ್ಟ ಆರೋಪವಿದೆ. ಪ್ರಕರಣದ ಸಂಬಂಧ ಇ.ಡಿ. ಅಧಿಕಾರಿಗಳು ನಲಪಾಡ್ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಮುಂಬೈ ಗೆಳೆಯನ ಮುಖಾಂತರ ಹವಾಲಾದಲ್ಲಿ ನಲಪಾಡ್‌ಗೆ ಹಣ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ.
ಬಿಟ್ ಕಾಯಿನ್ ಹಗರಣ ಸಂಬಂಧ ಪರಪ್ಪನ ಅಗ್ರಹಾರದಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್ ಶ್ರೀಕಿ, ರಾಬಿನ್ ಖಂಡೆವಾಲಾ, ಅನೀಶ್ ಹೆಗ್ಡೆಯನ್ನು ಇ.ಡಿ.ಅಧಿಕಾರಿಗಳು ಇತ್ತೀಚೆಗೆ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ನಲಪಾಡ್ ವಿಚಾರಣೆಗೂ ಮುನ್ನ ಆರೋಪಿಗಳ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಹ್ಯಾಕರ್ ಶ್ರೀಕಿ ಅಮೆರಿಕ ಮೂಲದ ಕಂಪನಿ ಹ್ಯಾಕ್ ಮಾಡಿದ್ದ. ಹೀಗಾಗಿ ಮತ್ತೆ ದಾಖಲೆಗಳ ಜತೆ ವಿಚಾರಣೆ ನಡೆಸಲಾಗಿದೆ. ಆರೋಪಿಗಳು ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್, ಆನ್‌ಲೈನ್ ಪೋಕರ್ ಜೂಜಾಟದ ತಾಣಗಳು ಮತ್ತು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳನ್ನು ಹ್ಯಾಕ್ ಮಾಡಿ ದೊಡ್ಡಮೊತ್ತದ ಬಿಟ್‌ಕಾಯಿನ್ ಮತ್ತು ಇಥೆರಿಯಮ್ ಕದ್ದ ಆರೋಪ ಎದುರಿಸುತ್ತಿದ್ದಾರೆ.