ಕನ್ನಡಪ್ರಭ ವಾರ್ತೆ ಮೈಸೂರುಇಡಿ ತನಿಖಾ ಸಂಸ್ಥೆಯು ಲೋಕಾಯುಕ್ತಕ್ಕೆ ಬರೆದಿರುವ ಪತ್ರ ಸುಳ್ಳು ಮಾಹಿತಿಯಿಂದ ಕೂಡಿದೆ. ಯಾವುದೇ ತನಿಖಾ ಸಂಸ್ಥೆಗಳು ತಮ್ಮ ವರದಿಯನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ ಎಂದು ಶಾಸಕ ಕೆ. ಹರೀಶ್ ಗೌಡ ಹೇಳಿದ್ದಾರೆ.ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಬಿಜೆಪಿಯವರು ಸೃಷ್ಟಿಸಿರುವ ಸುಳ್ಳು. 50:50 ನಿವೇಶನ ಹಂಚಿಕೆಯಲ್ಲಿ ಬಹಳಷ್ಟು ಅಕ್ರಮ ಆಗಿದೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಪತ್ನಿ ಪಡೆದಿರುವ ಸೈಟ್ ವಿಚಾರದಲ್ಲಿ ಅಕ್ರಮ ಆಗಿಲ್ಲ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಯಾವುದೇ ಪ್ರಭಾವ ಬೀರಿಲ್ಲ. ಇಡಿ ತಮ್ಮ ತನಿಖಾ ವರದಿಯನ್ನು ಯಾವುದೇ ಮಾಧ್ಯಮಗಳಿಗೆ ನೀಡುವುದಿಲ್ಲ. ಅವರ ವರದಿ ನಿಜವಾಗಿದಲ್ಲಿ, ಫೋರೆನ್ಸಿಕ್ ವರದಿ ಆಧಾರ ಸಮೇತ ಸಾಬೀತುಪಡಿಸಲಿ ಆಗ ನಂಬುತ್ತೇವೆ ಎಂದು ಅವರು ತಿಳಿಸಿದರು.ಚಾಮುಂಡೇಶ್ವರಿ ಸಹಕಾರ ಸಂಘದ ಹೆಸರಿನಲ್ಲಿ ನಿವೇಶನ ನೀಡಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀರ್ಮಾನಿಸಿತ್ತು. ಸಿಎಂ ಸಿದ್ದರಾಮಯ್ಯ ಗಮನಕ್ಕೆ ಈ ವಿಷಯ ತಂದಿದ್ದೆ. ಈ ಹಗರಣ ನಾವು ಬಯಲು ಮಾಡುತ್ತೇವೆ ಎಂದು ಗೊತ್ತಾದ ಮೇಲೆ ಬಿಜೆಪಿಯವರು ಸಿಎಂ ಮೇಲೆ ಮುಡಾ ವಿಚಾರದಲ್ಲಿ ಇಲ್ಲ ಸಲ್ಲದ ಆರೋಪ ಆರಂಭಿಸಿದರು. ಈಗ ಸಿಎಂ ನಿರ್ದೇಶನದಂತೆ 48 ನಿವೇಶನಗಳ ಮಂಜೂರಾತಿ ರದ್ದಾಗಿದೆ. ಇದು ಮುಡಾ ಕ್ಲೀನ್ ನ ಮೊದಲ ಹೆಜ್ಜೆ. ಇದು 600 ಕೋಟಿ ರು. ಆಸ್ತಿ. ಈ ಹಗರಣದಲ್ಲಿ ರಾಜಕಾರಣಿಗಳು, ರಿಯಲ್ ಎಸ್ಟೇಟ್ ನವರೂ ಭಾಗಿಯಾಗಿದ್ದಾರೆ ಎಂದರು.ಚಾಮುಂಡೇಶ್ವರಿ ಸಹಕಾರ ಸಂಘದ ಹೆಸರಿನಲ್ಲಿ ಬೇನಾಮಿ ಜನರಿಗೆ ನಿವೇಶನ ಕೊಡಿಸಲಾಗಿದೆ. ಹಗರಣದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ಮೇಲೆ ಕ್ರಮ ಆಗುತ್ತದೆ. 50:50 ನಿವೇಶನ ಹಂಚಿಕೆಯಲ್ಲಿ ಬಹಳಷ್ಟು ಅಕ್ರಮ ಆಗಿದೆ. ಸಿಎಂ ಪತ್ನಿ ಪಡೆದಿರುವ ಸೈಟ್ ವಿಚಾರದಲ್ಲಿ ಅಕ್ರಮ ಆಗಿಲ್ಲ ಎಂದು ಅವರು ತಿಳಿಸಿದರು.ಅಶೋಕ್ ಮೈಸೂರು ಭೇಟಿಬಿಜೆಪಿ ಅಧಿಕಾರದಲ್ಲಿದ್ದಾಗಲೇ ವಕ್ಫ್ ಬೋರ್ಡ್ ಹೆಸರಿನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಆದರೂ ಆರ್. ಅಶೋಕ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕೋಮು ಸೌಹಾರ್ದ ಕದಡುವ ಕೆಲಸವನ್ನು ಮಾಡುತ್ತಿದ್ದಾರೆ. ವಿಪಕ್ಷ ಬಿಜೆಪಿ ಬಣ ಜಗಳದಲ್ಲಿ ಮುಳುಗಿದೆ. ವಿಜಯೇಂದ್ರ ಹಾಗು ಯತ್ನಾಳ್ ಬಣಗಳ ನಡುವೆ ಕಿತ್ತಾಟ ನಡೆದಿದೆ. ಇದರ ಮಧ್ಯೆ ಆರ್. ಅಶೋಕ್, ಸಿ.ಟಿ. ರವಿ ಅವರು ವಕ್ಫ್ ಬೋರ್ಡ್ ವಿರುದ್ಧ ಪ್ರವಾಸ ಕೈಗೊಂಡಿದ್ದಾರೆ. ಶಾಂತಿ ಸೌಹಾರ್ಧ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.ಇದಕ್ಕೆ ಮೈಸೂರಿನ ಜನರು ಅವಕಾಶ ಕೊಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.