ರೇಣುಕಾ ಯಲ್ಲಮ್ಮದೇವಿ ದೇವಸ್ಥಾನಕ್ಕೆ ಬಂತು ಶುಕ್ರದೆಸೆ!

KannadaprabhaNewsNetwork |  
Published : Dec 05, 2024, 12:31 AM IST
ಯಲ್ಲಮ್ಮ ದೇವಸ್ಥಾನ | Kannada Prabha

ಸಾರಾಂಶ

ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರಗಳಲ್ಲೊಂದಾದ ಸುಕ್ಷೇತ್ರ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಕೊನೆಗೂ ಶುಕ್ರದೆಸೆ ಕೂಡಿಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸವದತ್ತಿ ಶ್ರೀ ಯಲ್ಲಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿವೆ. ಈಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ₹100 ಕೋಟಿ ಅನುದಾನ ಮಂಜೂರು ಮಾಡಿದೆ.

ಶ್ರೀಶೈಲ ಮಠದ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರಗಳಲ್ಲೊಂದಾದ ಸುಕ್ಷೇತ್ರ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಕೊನೆಗೂ ಶುಕ್ರದೆಸೆ ಕೂಡಿಬಂದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸವದತ್ತಿ ಶ್ರೀ ಯಲ್ಲಮ್ಮ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿವೆ. ಈಗ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ₹100 ಕೋಟಿ ಅನುದಾನ ಮಂಜೂರು ಮಾಡಿದೆ.

ಕಳೆದ ವರ್ಷ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಯಲ್ಲಮ್ಮ ಕ್ಷೇತ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮಸೂದೆ ಅಂಗೀಕರಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಚಾಲನೆ ಕೊಟ್ಟಿತ್ತು. ಅಲ್ಲದೆ, ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನದ ಆವರಣದಲ್ಲಿ ₹21 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು, ಪ್ರವಾಸಿಗರನ್ನು ಆಕರ್ಷಿಸಲು ರಾಜ್ಯ ಸಚಿವ ಸಂಪುಟ ದೇವಾಲಯದ ಆವರಣದಲ್ಲಿ ರೋಪ್‌ ವೇ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಲಕ್ಷಾಂತರ ಭಕ್ತರಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸುತ್ತಿದೆ.

ದೇವಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿಗೆ ಸುಮಾರು 1000 ಎಕರೆ ಭೂಮಿ ಹೊಂದಿದೆ. ಅಲ್ಲದೆ, ಮುಜರಾಯಿ ಇಲಾಖೆಗೆ ಒಳಪಟ್ಟಿರುವ ದೇವಾಲಯದ ಸುತ್ತಮುತ್ತಲು 87 ಎಕರೆ ಪ್ರದೇಶ, ಪ್ರವಾಸೋದ್ಯಮ ಇಲಾಖೆಗೆ ಸೇರಿದ 1000 ಎಕರೆ ಜಮೀನು ಲಭ್ಯವಿದೆ. ಆಂಧ್ರಪ್ರದೇಶದ ತಿರುಪತಿ ಮಾದರಿಯಲ್ಲಿ ಶ್ರೀ ರೇಣುಕಾ ಯಲ್ಲಮ್ಮದೇವಿಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಸತಿ ಗೃಹಗಳು, ಯಾತ್ರಿ ನಿವಾಸ,ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು ಮತ್ತಿತರ ಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ.ಮೊದಲ ಹಂತದಲ್ಲಿ 2000 ಅತಿಥಿ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕ್ಷೇತ್ರಕ್ಕೆ ಕರ್ನಾಟಕ ಮಹಾರಾಷ್ಟ್ರ, ತಮಿಳುನಾಡು, ಗೋವಾ ಸೇರಿದಂತೆ ರಾಜ್ಯ ಸೇರಿ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. 2022ರ ಏಪ್ರಿಲ್‌ನಿಂದ 2023ರ ಮಾರ್ಚ್ ವರೆಗೆ ಅಂದಾಜು 1.23 ಕೋಟಿ ಜನ ಯಲಮ್ಮನ ಗುಡ್ಡಕ್ಕೆ ಭೇಟಿ ನೀಡಿದ್ದರು. ಈ ಅವಧಿಯಲ್ಲಿ 87 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.₹ 100 ಕೋಟಿ ಅನುದಾನಕ್ಕೆ ಕ್ರೆಡಿಟ್‌ ವಾರ್‌:

ಶ್ರೀಕ್ಷೇತ್ರ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ₹100 ಕೋಟಿ ಅನುದಾನ ಮಂಜೂರು ಮಾಡಿರುವ ವಿಚಾರದಲ್ಲಿ ಈಗ ಪಕ್ಷಗಳ ಮಧ್ಯೆ ಕ್ರೆಡಿಟ್‌ ವಾರ್‌ ಶುರುವಾಗಿದೆ.

ತಮ್ಮ ಮನವಿ ಮೇರೆಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಕ್ಷೇತ್ರದ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದರೆ, ಬೆಳಗಾವಿ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ತಮ್ಮ ಮನವಿ ಮೇರೆಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ₹100 ಕೋಟಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ₹100 ಕೋಟಿಯ ಲಾಭ ಪಡೆದುಕೊಳ್ಳಲು ಪೈಪೋಟಿಗೆ ಇಳಿದಿವೆ.

₹1 ಕೋಟಿಗೂ ಅಧಿಕ ಭಕ್ತರು ಆಗಮಿಸುವ ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ಮಂಜೂರು ಮಾಡಿದೆ.

-ಎಚ್.ಕೆ.ಪಾಟೀಲ, ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ

PREV

Recommended Stories

ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ
ಧರ್ಮಸ್ಥಳ ಕಾಡಲ್ಲಿ ಅಸ್ಥಿಪಂಜರ: ಇದು ದೂರುದಾರ ತೋರಿಸಿದ್ದಲ್ಲ