ಸಚಿವ ಸತೀಶ ಬಾಮೈದ ಮೇಲಿನ ಇಡಿ ದಾಳಿ ಅಂತ್ಯ

KannadaprabhaNewsNetwork |  
Published : Jun 26, 2026, 03:15 AM ISTUpdated : Jun 26, 2026, 06:04 AM IST
Karnataka Excise Scam Y Manjunath

ಸಾರಾಂಶ

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸಹೋದರಿ ಪತಿ (ಭಾಮೈದ) ಹಾಗೂ ಅಬಕಾರಿ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ್ದ ಸುದೀರ್ಘ ಶೋಧ ಕಾರ್ಯ ಗುರುವಾರ ಬೆಳಗ್ಗೆ ಅಂತ್ಯಗೊಂಡಿದೆ. 

 ಬೆಳಗಾವಿ :  ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸಹೋದರಿ ಪತಿ (ಭಾಮೈದ) ಹಾಗೂ ಅಬಕಾರಿ ಇಲಾಖೆಯ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ್ದ ಸುದೀರ್ಘ ಶೋಧ ಕಾರ್ಯ ಗುರುವಾರ ಬೆಳಗ್ಗೆ ಅಂತ್ಯಗೊಂಡಿದೆ.  

ಸತತ 24 ಗಂಟೆಗಳ ಕಾಲ ನಿರಂತರವಾಗಿ ಪರಿಶೀಲನೆ ನಡೆಸಿದ ಇಡಿ ಅಧಿಕಾರಿಗಳು ಬೆಳಗಾವಿಯಿಂದ ಬೆಂಗಳೂರಿಗೆ ಮರಳಿದ್ದು, ಶೋಧದ ವೇಳೆ ವಶಪಡಿಸಿಕೊಂಡ ದಾಖಲೆಗಳು, ಡಿಜಿಟಲ್ ಮಾಹಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಮಗ್ರ ವರದಿ ಸಿದ್ಧಪಡಿಸಿ ಇಡಿ ನಿರ್ದೇಶಕರಿಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಗಿನ ಜಾವ 5.30ಕ್ಕೆ ಬೆಂಗಳೂರು ಹಾಗೂ ಗೋವಾ ಘಟಕಗಳ ಇಡಿ ಅಧಿಕಾರಿಗಳ ಜಂಟಿ ತಂಡವು ನಗರದ ಟಿವಿ ಸೆಂಟರ್‌ನಲ್ಲಿರುವ ವೈ.ಮಂಜುನಾಥ ಅವರ ಐಷಾರಾಮಿ ನಿವಾಸಕ್ಕೆ ದಿಢೀರ್ ದಾಳಿ ನಡೆಸಿತ್ತು. ಇದೇ ವೇಳೆ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅವರ ಆಪ್ತರು, ಸಂಬಂಧಿಕರು ಮತ್ತು ವ್ಯಾವಹಾರಿಕ ಸಂಪರ್ಕ ಹೊಂದಿದ್ದಾರೆ ಎನ್ನಲಾದ ವ್ಯಕ್ತಿಗಳ ಮನೆಗಳು ಹಾಗೂ ಕಚೇರಿಗಳ ಮೇಲೂ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು. ರಾಜ್ಯಾದ್ಯಂತ ಬೆಂಗಳೂರು, ಮೈಸೂರು ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಅಬಕಾರಿ ಇಲಾಖೆ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ನಡೆದಿರುವ ಅತಿದೊಡ್ಡ ಇಡಿ ಕಾರ್ಯಾಚರಣೆಗಳಲ್ಲಿ ಇದೂ ಒಂದಾಗಿದೆ ಎಂದು ಪರಿಗಣಿಸಲಾಗಿದೆ. 

ಶೋಧ ಕಾರ್ಯಾವಧಿಯಲ್ಲಿ ಅಧಿಕಾರಿಗಳು ಮನೆ ಬಿಟ್ಟು ಹೊರಗೆ ಹೋಗದೆ, ಉಪಹಾರ ಮತ್ತು ಊಟವನ್ನು ಮನೆಗೇ ತರಿಸಿಕೊಂಡು ದಾಖಲೆಗಳ ಪರಿಶೀಲನೆ ನಡೆಸಿದರು ಎಂದು ಮೂಲಗಳು ಹೇಳಿವೆ. ಹಲವು ಕಡತಗಳು, ಬ್ಯಾಂಕ್ ವಹಿವಾಟಿನ ದಾಖಲೆಗಳು, ಆಸ್ತಿ ಪತ್ರಗಳು, ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲಿ ಸಂಗ್ರಹವಾಗಿದ್ದ ಮಾಹಿತಿಗಳನ್ನು ಪರಿಶೀಲಿಸಲಾಗಿದೆ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಮಂಜುನಾಥ ಅವರ ಪತ್ನಿ ಹಾಗೂ ಕುಟುಂಬ ಸದಸ್ಯರನ್ನು ಅಧಿಕಾರಿಗಳು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿ, ಕೆಲವು ವ್ಯವಹಾರಗಳು, ಆಸ್ತಿ ಖರೀದಿ ಹಾಗೂ ಹಣಕಾಸು ವಹಿವಾಟುಗಳ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶೋಧದ ವೇಳೆ ಬೇನಾಮಿ ಬಾರ್ ಪರವಾನಗಿಗಳಿಗೆ ಸಂಬಂಧಿಸಿದ ದಾಖಲೆಗಳು, ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಪತ್ರಗಳು, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. 

ಕೆಲವು ದಾಖಲೆಗಳು ಮತ್ತು ಆಭರಣಗಳ ಮೌಲ್ಯ ನಿರ್ಧಾರಕ್ಕಾಗಿ ತಜ್ಞರ ಸಹಾಯವನ್ನೂ ಅಧಿಕಾರಿಗಳು ಪಡೆದಿದ್ದಾರೆ ಎನ್ನಲಾಗಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರ ಆಪ್ತರಾಗಿರುವ ಗೋವಾ ಮೂಲದ ಲೋಬೋ ಎಂಬುವರನ್ನು ಪತ್ತೆಹಚ್ಚಲು ಇಡಿ ಅಧಿಕಾರಿಗಳು ಬೆಳಗಾವಿಯಲ್ಲಿ ತೀವ್ರ ಶೋಧ ನಡೆಸಿದ್ದರು. ಆದರೆ ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲು ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಇಡಿಯ ಎರಡು ವಿಶೇಷ ತಂಡಗಳನ್ನು ಗೋವಾಕ್ಕೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಗೋವಾ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ನಡೆದಿರುವ ಕೆಲವು ಆರ್ಥಿಕ ವ್ಯವಹಾರಗಳ ಸುಳಿವನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. 

ಹಲವು ಅವ್ಯವಹಾರದ ಶಂಕೆ:

ವೈ.ಮಂಜುನಾಥ ವಿರುದ್ಧ ಸರ್ಕಾರಿ ಸೇವೆಯಲ್ಲಿದ್ದ ಅವಧಿಯಲ್ಲೇ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿರುವುದು, ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಪರವಾನಗಿಗಳನ್ನು ಹೊಂದಿರುವುದು, ಹವಾಲಾ ಮಾರ್ಗದ ಮೂಲಕ ಅಕ್ರಮ ಹಣ ವರ್ಗಾವಣೆ ನಡೆಸಿರುವುದು ಹಾಗೂ ದೇಶದ ಗಡಿ ದಾಟಿದ ಆರ್ಥಿಕ ವಹಿವಾಟುಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ಕೈಗೆತ್ತಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಕೂಡ ವಿವಾದಕ್ಕೆ

ವೈ.ಮಂಜುನಾಥ್ ಅವರು ಈ ಹಿಂದೆ ಕೂಡ ವಿವಾದಕ್ಕೆ ಸಿಲುಕಿದ್ದರು. 2009ರಿಂದ 2013ರವರೆಗೆ ಮೈಸೂರಿನಲ್ಲಿ ಅಬಕಾರಿ ಉಪ ಆಯುಕ್ತರಾಗಿದ್ದ ವೇಳೆ ಲಂಚ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ಅವರನ್ನು ಬಂಧಿಸಿದ್ದರು. ಸುಮಾರು 15 ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಅವರು ಬಿಡುಗಡೆಯಾಗಿ ಬಂದಾಗ ಅವರ ಬೆಂಬಲಿಗರು ಜೈಲಿನಿಂದ ಸುಮಾರು ಎರಡು ಕಿಲೋಮೀಟರ್ ದೂರ ಅವರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ್ದರು.  

ಆ ಘಟನೆ ಆ ವೇಳೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.ಪ್ರಸ್ತುತ ಇಡಿ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಣೆ, ಸಮನ್ಸ್ ಹಾಗೂ ಹೊಸ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕ್ರಿಪ್ಟೋ ಕರೆನ್ಸಿ ಬದಲಾವಣೆ ನೆಪದಲ್ಲಿ ಟೆಕ್ಕಿ ಬಳಿ ದರೋಡೆ ಮಾಡಿದ್ದ 12 ಮಂದಿ ಬಂಧನ
₹75 ಕೋಟಿಯ 12 ಬಿಡಿಎ ಸೈಟ್‌ ಕಬಳಿಕೆ: ಪಾಲಿಕೆ ಮಾಜಿ ಸದಸ್ಯರ ವಿರುದ್ಧ ದೂರು