‘ಸತೀಶ್‌ ಮೇಲೆ ಇ.ಡಿ. ದಾಳಿ ರಾಜಕೀಯ ಪ್ರೇರಿತ’

KannadaprabhaNewsNetwork |  
Published : Sep 17, 2026, 01:45 AM IST
ರಣದೀಪ್ ಸಿಂಗ್ ಸುರ್ಜೇವಾಲ | Kannada Prabha

ಸಾರಾಂಶ

ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಎಸ್‌ಟಿ ಹಾಗೂ ಶೋಷಿತ ಸಮುದಾಯಗಳ ಅತ್ಯಂತ ದೊಡ್ಡ ನಾಯಕ. ಹೀಗಾಗಿ ಇ.ಡಿ(ಜಾರಿ ನಿರ್ದೇಶನಾಲಯ) ಅವರನ್ನು ಗುರಿಯಾಗಿಸಿಕೊಂಡಿದ್ದು, ಬಿಜೆಪಿಯ ಚುನಾವಣಾ ಯಂತ್ರವಾಗಿ ಇ.ಡಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯದ ಎಸ್‌ಟಿ ಹಾಗೂ ಶೋಷಿತ ಸಮುದಾಯಗಳ ಅತ್ಯಂತ ದೊಡ್ಡ ನಾಯಕ. ಹೀಗಾಗಿ ಇ.ಡಿ(ಜಾರಿ ನಿರ್ದೇಶನಾಲಯ) ಅವರನ್ನು ಗುರಿಯಾಗಿಸಿಕೊಂಡಿದ್ದು, ಬಿಜೆಪಿಯ ಚುನಾವಣಾ ಯಂತ್ರವಾಗಿ ಇ.ಡಿ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸತೀಶ್ ಜಾರಕಿಹೊಳಿ ವಿರುದ್ಧ ಇದು ಎರಡನೇ ದಾಳಿ ಆಗಿದೆ. ಈ ಹಿಂದೆಯೂ ಹಲವು ಕಾಂಗ್ರೆಸ್‌ ನಾಯಕರ ಮೇಲೆ ದಾಳಿ ಆಗಿತ್ತು. ಇದೀಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ 1.9 ವರ್ಷದ ಅಂತರದಲ್ಲಿರುವುದರಿಂದ ಇ.ಡಿ ದಾಳಿ ಆಗಿದೆ. ಇದಲ್ಲದೆ ಶೀಘ್ರದಲ್ಲೇ ಆದಾಯ ತೆರಿಗೆ ಮತ್ತು ಸಿಬಿಐ ಅವರೂ ಬರುತ್ತಾರೆ. ಇವರೆಲ್ಲರೂ ಬಂದ ಮೇಲೆ ಅವರ ಬೆನ್ನಲ್ಲೇ ಚುನಾವಣೆಗೆ ಆರು ತಿಂಗಳು ಇರುವಾಗ ಪ್ರಧಾನಮಂತ್ರಿ ಮೋದಿ ಹಾಗೂ ಅಮಿತ್ ಶಾ ಬರುತ್ತಾರೆ. ಇದಕ್ಕೆಲ್ಲ ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಹತಾಶೆಗೊಂಡಿದೆ. ಪಕ್ಷದಲ್ಲಿನ ಆಂತರಿಕ ಕಚ್ಚಾಟ, ಒಳಜಗಳದಿಂದ ದಿಕ್ಕು ತೋಚಿದಂತಾಗಿದೆ. ಹೀಗಾಗಿಯೇ ಇ.ಡಿ ಮೂಲಕ ನಮ್ಮ ಅಹಿಂದ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಬದಲಿಗೆ ಪಕ್ಷದ ಎಲ್ಲಾ ನಾಯಕರೂ ಸತೀಶ್ ಜಾರಕಿಹೊಳಿ ಅವರೊಂದಿಗೆ ಒಟ್ಟಾಗಿ ನಿಲ್ಲುತ್ತೇವೆ ಎಂದು ಸುರ್ಜೇವಾಲ ಸ್ಪಷ್ಟಪಡಿಸಿದರು.

ಡಿ.ಕೆ.ಶಿವಕುಮಾರ್‌ ಸಹೋದರರು, ಸಿದ್ದರಾಮಯ್ಯ, ಬೈರತಿ ಸುರೇಶ್, ಜಮೀರ್ ಅಹ್ಮದ್‌ಖಾನ್‌, ವೀರೇಂದ್ರ ಪಪ್ಪಿ, ಡಾ.ಜಿ. ಪರಮೇಶ್ವರ್, ನಾರಾ ಭರತ್ ರೆಡ್ಡಿ ಸೇರಿದಂತೆ ಹಲವರ ಮೇಲೆ ದಾಳಿ ನಡೆಸಿದ್ದಾರೆ.

ಆದರೆ, ಎಚ್‌.ಡಿ ಕುಮಾರಸ್ವಾಮಿ, ರೇಣುಕಾಚಾರ್ಯ ಮತ್ತು ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣಗಳಲ್ಲಿ ಮಾತ್ರ ಅನುಮತಿಗೆ ಕಾಯುತ್ತಿದೆ. ರಾಜ್ಯಪಾಲರು ಏಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಿಲ್ಲ. ಇದು ಬಿಜೆಪಿಯ ''''ಸೇಡಿನ ಮನೋಭಾವ'''' ಹಾಗೂ ಪೂರ್ವಾಗ್ರಹ ಪೀಡಿತ ಧೋರಣೆ ಅಲ್ಲವೇ ಎಂದು ಪ್ರಶ್ನಿಸಿದರು.

ಇ.ಡಿ ದಾಖಲಿಸಿದ 8ರಿಂದ 9 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕೇವಲ 39 ಪ್ರಕರಣಗಳಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ಬಹುತೇಕ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ದೂರಿದರು.

ಮಹಿಳಾ ಸಚಿವರಿಲ್ಲದಿರುವುದು ನನ್ನದೇ ತಪ್ಪು: ಸುರ್ಜೇವಾಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಂಪುಟದಲ್ಲಿ ಮಹಿಳಾ ಸಚಿವರು ಇಲ್ಲದಿರುವುದು ನನ್ನದೇ ತಪ್ಪು. ದೆಹಲಿ ಹೈಕಮಾಂಡ್‌ನಿಂದ ಆದ ತಪ್ಪಲ್ಲ ಎಂದು ಇದೇ ವೇಳೆ ಸುರ್ಜೇವಾಲ ಹೇಳಿದರು.

ನಾನೇ ಒಬ್ಬ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಸಮಸ್ಯೆಯಾಯಿತು. ಅದು ನನ್ನದೇ ತಪ್ಪಾಗಿದ್ದು, ಶೀಘ್ರದಲ್ಲೇ ಸೂಕ್ತ ಅಭ್ಯರ್ಥಿಯನ್ನು ನಿರ್ಧರಿಸುತ್ತೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ವಿಶ್ವಕರ್ಮ ಮಹೋತ್ಸವ ಆಚರಣೆಗೆ ಸಿದ್ಧತೆ
ರೈಲ್ವೆ ಭೂಸ್ವಾಧೀನ ಪರಿಹಾರದಲ್ಲಿ ಅಕ್ರಮ ಆರೋಪ