ಐಎಎಸ್ ಜ್ಞಾನೇಂದ್ರ ಮನೆ ಬಾಗಿಲು ಮುರಿದು ಇಡಿ ದಾಳಿ

KannadaprabhaNewsNetwork |  
Published : Aug 24, 2026, 02:15 AM IST
ED

ಸಾರಾಂಶ

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿವಾಸದ ಬಾಗಿಲು ಮುರಿದು ಒಳ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ.

 ಬೆಂಗಳೂರು : ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ಮುಂದುವರಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಿವಾಸದ ಬಾಗಿಲು ಮುರಿದು ಒಳ ಪ್ರವೇಶಿಸಿ ಪರಿಶೀಲನೆ ನಡೆಸಿದ್ದಾರೆ.

ಹಗರಣದ ಸಂಬಂಧ ಇ.ಡಿ ಅಧಿಕಾರಿಗಳು ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿ‍ವಶಂಕಪ್ಪ ಸಾಹುಕಾರ್‌, ಕೆಪಿಎಸ್‌ಸಿ ಕಚೇರಿ, ಸದಸ್ಯರ, ಮಧ್ಯವರ್ತಿಗಳು, ಅಭ್ಯರ್ಥಿಗಳ ಮನೆಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿ ಶೋಧಿಸಿದ್ದರು. ಇ.ಡಿ ದಾಳಿಯ ಬೆನ್ನಲ್ಲೇ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿರುವ ಜ್ಞಾನೇಂದ್ರ ಕುಮಾರ್ ಅವರ ಬೆಂಗಳೂರಿನ ಜಯಮಹಲ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಪಿಎಸ್‌ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್‌ ಅವಧಿಯಲ್ಲೇ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ನಡೆದಿದ್ದು, ಈ ಹಗರಣದಲ್ಲಿ ಜ್ಞಾನೇಂದ್ರ ಕುಮಾರ್‌ ಅವರು ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಜ್ಞಾನೇಂದ್ರ ಕುಮಾರ್‌ ಪ್ರಸ್ತುತ ಎಂಎಸ್‌ಎಂಇ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಯನ್ನು ಇ.ಡಿ ಅಧಿಕಾರಿಗಳು ಕೈಗೆತ್ತಿಕೊಳ್ಳುತ್ತಿದ್ದಂತೆಯೇ, ಎಚ್ಚೆತ್ತ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಆದರೆ ಅವರು ನಾಪತ್ತೆಯಾಗಿಲ್ಲ. ಅವರ ತಂದೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಗೃಹ ಸಚಿವರು ಶನಿವಾರ ಸ್ಪಷ್ಟಪಡಿಸಿದ್ದರು. ಆದರೆ ಇ.ಡಿ ದಾಳಿಯ ಬೆನ್ನಲ್ಲೆ ಕಳೆದ ಕೆಲ ದಿನಗಳಿಂದ ಅವರು ಯಾರ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಸೆಕ್ಯುರಿಟಿ ಗಾರ್ಡ್‌ನಿಂದ ಭಾರೀ ಹೈಡ್ರಾಮಾ:

ಜಯಮಹಲ್‌ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿರುವ ಜ್ಞಾನೇಂದ್ರ ಕುಮಾರ್ ಅವರ ಫ್ಲ್ಯಾಟ್‌ಗೆ ಭಾನುವಾರ ಮುಂಜಾನೆ 3 ಇನ್ನೋವಾ ಕಾರುಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಯೋಧರೊಂದಿಗೆ ಇ.ಡಿ ಅಧಿಕಾರಿಗಳ ತಂಡ ಆಗಮಿಸಿತು. ಅಧಿಕಾರಿಗಳ ತಂಡ ಬರುತ್ತಿದ್ದಂತೆ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ಗಾರ್ಡ್, ಮುಖ್ಯ ಗೇಟ್‌ಗೆ ಬೀಗ ಹಾಕಿ ‘ಯಾರನ್ನೂ ಒಳಗೆ ಬಿಡಲು ನನಗೆ ಅನುಮತಿ ಇಲ್ಲ’ ಎಂದು ಅಧಿಕಾರಿಗಳನ್ನು ತಡೆದಿದ್ದಾನೆ. ಬಳಿಕ ಸ್ಥಳೀಯ ಪೊಲೀಸರ ಸಮ್ಮುಖದಲ್ಲಿ ಅಧಿಕಾರಿಗಳು ಸೆಕ್ಯುರಿಟಿ ಸಿಬ್ಬಂದಿ ಜತೆ ಮಾತುಕತೆ ನಡೆಸಿ, ಕಾನೂನು ಕ್ರಮದ ಎಚ್ಚರಿಕೆ ನೀಡಿದ ಬಳಿಕ ಗೇಟ್ ತೆರೆದಿದ್ದಾನೆ. ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್‌ಮೆಂಟ್ ಮುಂಭಾಗ ಬ್ಯಾರಿಕೇಡ್ ಹಾಕಿ ಸಿಆರ್‌ಪಿಎಫ್ ಭದ್ರತೆ ಒದಗಿಸಿ ಬೀಗ ಮುರಿದು ಮನೆಯನ್ನು ಪ್ರವೇಶಿಸಿ ಹಲವು ಗಂಟೆಗಳ ಕಾಲ ಮನೆಯ ಮೂಲೆ ಮೂಲೆಗಳಲ್ಲಿ ತಪಾಸಣೆ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಸಾಕ್ಷಿಗೆ ನಿರಾಕರಿಸಿದ ಎದುರು ಮನೆಯವರು!:

ಅಧಿಕಾರಿಯ ಮನೆ ಲಾಕ್ ಆಗಿದ್ದರಿಂದ ಬೀಗ ಮುರಿಯಲು ಸ್ಥಳೀಯ ಸಾಕ್ಷಿಗಳ ಅಗತ್ಯವಿತ್ತು. ಹೀಗಾಗಿ ಇ.ಡಿ ಅಧಿಕಾರಿಗಳು ನಿಯಮಾವಳಿ ಪ್ರಕಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆಗೆ ಲಿಖಿತ ಮಾಹಿತಿ ರವಾನಿಸಿದರು. ಬಳಿಕ ಜ್ಞಾನೇಂದ್ರ ಕುಮಾರ್ ಅವರ ಎದುರು ಮನೆಯ ವ್ಯಕ್ತಿಯ ಬಳಿ ಬಾಗಿಲು ತೆಗೆಯುವಾಗ ಸಾಕ್ಷಿಯಾಗುವಂತೆ ಅಧಿಕಾರಿಗಳು ಮನವಿ ಮಾಡಿದರು. ಆದರೆ ಆ ವ್ಯಕ್ತಿ ತಾನು ಸಾಕ್ಷಿಯಾಗಲು ಸಾಧ್ಯವಿಲ್ಲ ಎಂದು ನೇರವಾಗಿ ನಿರಾಕರಿಸಿದರು. ನಂತರ ಮತ್ತೊಂದು ಮನೆಯವರ ಜತೆ ಮಾತನಾಡಿ ಮನವೊಲಿಸಿದ್ದಾಗ ಆತ ಅಧಿಕೃತ ಸಾಕ್ಷಿಯಾಗಲು ಒಪ್ಪಿಕೊಂಡಿರು.

ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಅಧಿಕಾರಿ:

ಇ.ಡಿ ದಾಳಿಯ ನಂತರ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇ.ಡಿ ದಾಳಿಗೆ ಹೆದರಿ ತಮ್ಮ ಊರಾದ ಉತ್ತರ ಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಹಿರಿಯ ಅಧಿಕಾರಿ ಸಾರ್ವಜನಿಕವಾಗಿ ಕಾಣಿಸದೆ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ದಸರಾಗೆ ಉಡುಪಿ ಮಾರ್ಗವಾಗಿ ಕಾರವಾರ, ಮಡಗಾವ್‌ಗೆ ರೈಲು
ವೃದ್ಧೆಗೆ ಚಿನ್ನಾಭರಣ ವಂಚಿಸಿದ್ದ ಜ್ಯೋತಿಷಿ ಸೆರೆ