ಶಿಗ್ಗಾಂವಿಯ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಪೊಲೀಸರು ಅವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಕರೆದಿರುವ ಶಿಗ್ಗಾಂವಿ ಬಂದ್‌ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಶಿಗ್ಗಾಂವಿ: ಶಿಗ್ಗಾಂವಿಯ ಹನುಮಾನ್ ದೇವಸ್ಥಾನದಲ್ಲಿ ಅನ್ಯಕೋಮಿನ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಮೂತ್ರ ವಿಸರ್ಜನೆ ಮಾಡಿದ್ದು, ಪೊಲೀಸರು ಅವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಕರೆದಿರುವ ಶಿಗ್ಗಾಂವಿ ಬಂದ್‌ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಶಿಗ್ಗಾಂವಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿರುವ ಶ್ರೀ ಹನುಮಾನ್ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದು ಅತ್ಯಂತ ಹೇಯ ಕೃತ್ಯ, ಕ್ಷಮಿಸಲಾರದಂತ ಕೃತ್ಯ. ಹನುಮಾನ್ ದೇವಸ್ಥಾನ ರಸ್ತೆಗಿಂತ ಎತ್ತರದಲ್ಲಿದೆ. ಅಲ್ಲಿ ಗೇಟ್ ಇದೆ. ಗೇಟ್ ತೆಗೆದು ಒಳಗೆ ಬಂದು ಸ್ಥಾಪಿತವಾಗಿರುವ ಹನುಮಂತ ದೇವರ ದೇವಸ್ಥಾನದಲ್ಲಿ ಒಳಗೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಆತ ಕುಡಿದ ಮತ್ತಿನಲ್ಲಿ ಇದ್ದಾನೆ ಎಂದು ಅನಿಸುವುದಿಲ್ಲ. ಆತ ಪ್ರಜ್ಞಾಪೂರ್ವಕವಾಗಿ ಮಾಡಿದ್ದಾನೆ. ಕುಡುಕರು ನಿಂತಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಪೊಲೀಸರು ಈ ಪ್ರಕರಣವನ್ನು ತಿಳಿಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಗಂಭೀರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಇದೊಂದೆ ಪ್ರಕರಣವನ್ನು ಪ್ರತ್ಯೇಕವಾಗಿ ನೋಡುವ ಹಾಗಿಲ್ಲ. ಶಿಗ್ಗಾಂವಿಯಲ್ಲಿ ಕೊಲೆ ಮಾಡಿ ಆ ಕುಟುಂಬದ ಮೇಲೆ ಒತ್ತಡ ಹೇರಿ ರಾಜೀ ಮಾಡುವ ಕೆಲಸ ಮಾಡಿದ್ದಾರೆ. ಸವಣೂರಿನಲ್ಲಿ ಶಿಕ್ಷಕನನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದರು. ಈ ಎರಡೂ ಪ್ರಕರಣದಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಇಂತಹ ಹಲವಾರು ಪ್ರಕರಣಗಳಾಗಿದ್ದು, ಕೆಲವು ಬೆಳಕಿಗೆ ಬಂದಿವೆ. ಈ ರೀತಿ ಹಲವಾರು ಪ್ರಕರಣಗಳು ಹಾನಗಲ್ಲ, ಹಾವೇರಿ, ರಾಣಿಬೆನ್ನೂರಿನಲ್ಲಿ ನಡೆದಿವೆ. ರಾಣಿಬೆನ್ನೂರಿನಲ್ಲಿ ಅಕ್ರಮ ಕಸಾಯಿಖಾನೆ ವಿರುದ್ಧ ಪ್ರತಿಭಟನೆ ನಡೆಸಿದ ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಕೋಮು ಶಾಂತಿ ಕದಡುವ ಕೆಲಸ: ಶಿಗ್ಗಾಂವಿಯಲ್ಲಿ ಈ ಘಟನೆ ನಡೆದ ತಕ್ಷಣ ಟ್ಯಾಕ್ಸಿ ಸ್ಟ್ಯಾಂಡ್ ಹುಡುಗರು ಜಾಗ್ರತರಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ ತಕ್ಷಣ ಕ್ರಮ ಕೈಗೊಂಡಿದ್ದಾರೆ. ಅವನು ಹಾನಗಲ್ಲ ತಾಲೂಕಿನ ಆಡೂರಿನವನು, ಅವನಿಗೆ ಶಿಗ್ಗಾಂವಿಯಲ್ಲಿ ಪಟ್ಟಾ ಕೊಟ್ಟಿದ್ದಾರೆ. ಅದಕ್ಕೆ ಅವನು ಶಾಸಕರಿಗೆ ತನ್ನ ರಿಟರ್ನ್ ಗಿಫ್ಟ್ ಕೊಟ್ಟಿದ್ದೇನೆ ಅಂತ ಹೇಳಿದ್ದಾನೆ. ಆ ರೀತಿ ಪ್ರಜ್ಞೆ ಇಲ್ಲದೇ ಹೇಳುತ್ತಾನಾ? ಶಿಗ್ಗಾಂವಿ-ಸವಣೂರಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಯಾವುದೇ ಕೋಮು ಸಂಘರ್ಷ ಇಲ್ಲದೇ ಶಾಂತಿ ಕಾಪಾಡುವ ಕೆಲಸ ಮಾಡಿದ್ದೇವೆ. ಆದರೆ ಆತ ಶಾಂತಿ ಕದಡುವ ಕೆಲಸ ಮಾಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಇಂತಹ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಿರುವುದಕ್ಕೆ ಈ ರೀತಿಯ ಬೆಳವಣಿಗೆ ಕಾರಣವಾಗಿದೆ. ಪೊಲೀಸರು ಕ್ರಮ ಕೈಗೊಂಡ ತಕ್ಷಣ ಮುಗಿಯುವುದಿಲ್ಲ. ಆತ ಮತ್ತೆ ಬೇಲ್ ಮೇಲೆ ಬಂದು ಇಲ್ಲಿಯೇ ನಿಂತು ನೀವೇನು ಮಾಡಿದ್ದೀರಿ ಎಂದು ಕೇಳುತ್ತಾನೆ. ಈಗಾಗಲೇ ಟ್ಯಾಕ್ಸಿ ಸ್ಟ್ಯಾಂಡ್‌ನವರು ಮತ್ತು ಪ್ರಮೋದ್ ಮುತಾಲಿಕ ಬಂದ್ ಕರೆ ನೀಡಿದ್ದಾರೆ. ಅವರಿಗೆ ನಮ್ಮ ಬೆಂಬಲ ಇದೆ. ಯಾವುದೇ ಕೋಮಿನ ವಿರುದ್ಧ ಹಬ್ಬದ ವಿರುದ್ಧ ನಮ್ಮ ಬಂದ್ ಇಲ್ಲ. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್‌ಗೆ ಬೆಂಬಲ ನೀಡಿ, ನಾವು ಯಾರಿಗೂ ಒತ್ತಡ ಹೇರಿ ಬಂದ್ ಮಾಡುವುದಿಲ್ಲ. ಹಿಂಸಾಚಾರ, ಕೋಮುಗಲಭೆ ಆಗಬಾರದು ಎಂದರೆ ಎಲ್ಲ ಕೋಮಿನವರು ಬಂದ್ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಹಾವೇರಿ ಜಿಲ್ಲಾಡಳಿತ ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂಬ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಹೋರಾಟ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಆದ್ದರಿಂದ ಎಲ್ಲ ಕೋಮಿನವರು ಬೆಂಬಲ ಕೊಡಬೇಕು. ಜನರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದರೆ ಜಿಲ್ಲಾಡಳಿತ ಏನು ಮಾಡುತ್ತದೆ? ಎಲ್ಲಿ ಬೇಕಲ್ಲಿ ನಂಬರ್ ಟು ದಂಧೆ ನಡೆಯುತ್ತಿದೆ. ಇಸ್ಪೀಟ್ ಆಡುವವರನ್ನು ಬಂಧಿಸುವುದಿಲ್ಲ. ಈ ಬಗ್ಗೆ ಎಷ್ಟು ಬಾರಿ ಎಸ್ಪಿ ಗಮನಕ್ಕೆ ತರಲಾಗಿದೆ. ಸರಾಸರಿ ಒಂದು ಗ್ರಾಮ ಪಂಚಾಯಿತಿಗೆ ಒಂದು ಕ್ಲಬ್ ನಡೆಯುತ್ತಿದೆ. ನಾನು ಜಿಲ್ಲಾಡಳಿತ, ಸರ್ಕಾರ, ಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿಯವರನ್ನು ಕೇಳುತ್ತೇನೆ ಎಂದು ಹೇಳಿದರು.

ಲಮಾಣಿಗೆ ತಿರುಗೇಟು: ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರು ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್‌ನ ಅಧಃಪತನ ತೋರಿಸುತ್ತದೆ. ಅಂತಹ ಮಂತ್ರಿ ಶಾಂತಿ ಕಾಪಾಡಲು ಸಾಧ್ಯವೇ? ಹಿರೇಕೆರೂರಿನಲ್ಲಿ ಕೊಲೆಯಾದಾಗ, ಹಾನಗಲ್ಲನಲ್ಲಿ ಗಲಾಟೆಯಾದಾಗ ರುದ್ರಪ್ಪ ಲಮಾಣಿ ಮಾತನಾಡಿದ್ದಾರಾ? ನಾವು ಈ ಮಣ್ಣಿನ ಅನ್ನ ತಿಂದಿದ್ದೇವೆ, ಹೀಗಾಗಿ ನಾವು ಸತ್ಯ ಮಾತನಾಡುತ್ತೇವೆ ಎಂದು ತಿರುಗೇಟು ನೀಡಿದರು.

ನಾಗೇಂದ್ರ ರಾಜಿನಾಮೆ ಪಡೆದರೆ ಚರ್ಚೆ: ಅಧಿವೇಶನದಲ್ಲಿ ಬರಗಾಲದ ಕುರಿತು ಚರ್ಚಿಸುತ್ತಿಲ್ಲ ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ತಿಂಗಳು ದೆಹಲಿಗೆ ಅಲೆದಾಡಿ ಕಾಲಹರಣ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಬರ ಬಿದ್ದಿದೆ, ಈಗ ಮೋಡ ಬಿತ್ತನೆ ಮಾಡುವ ಕುರಿತು ಮಾತನಾಡುತ್ತಾರೆ. ರಾಜ್ಯ ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕಿತ್ತು. ಇನ್ನೂ ಮೀನ-ಮೇಷ ಎಣಿಸುತ್ತಿದೆ. ಬರಗಾಲದ ಬಗ್ಗೆ ರಾಜ್ಯ ಸರ್ಕಾರಕ್ಕೆ ಅಷ್ಟು ಕಾಳಜಿ ಇದ್ದರೆ ನಾಳೆಯೇ ಸಚಿವ ನಾಗೇಂದ್ರ ರಾಜೀನಾಮೆ ಪಡೆಯಲಿ. ನಾವು ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.