ನಗರದಲ್ಲಿನ ಸರ್ಕಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳ ಅತಿಕ್ರಮಣ ತೆರವಿಗೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಡಳಿತ ಮುಂದಾಗಬೇಕು ಎಂಬ ಒತ್ತಾಸೆ ಕೇಳಿಬಂದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ನಗರದಲ್ಲಿ ವಿವಿಧ ಪ್ರಭಾವಿ ರಾಜಕೀಯ ಹಿಂಬಾಲಕರು ಅತಿಕ್ರಮಿಸಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಮೂಲಕ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇರಿಸಿದ್ದು, ಹತ್ತಾರು ಕೋಟಿ ಮೌಲ್ಯದ ಸರ್ಕಾರಿ ಭೂಮಿಯನ್ನು ಮರು ವಶಕ್ಕೆ ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ಮಾದರಿಯಲ್ಲಿ ನಗರದಲ್ಲಿನ ಸರ್ಕಾರಿ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳ ಅತಿಕ್ರಮಣ ತೆರವಿಗೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಮುಂದಾಗಬೇಕು ಎಂಬ ಒತ್ತಾಸೆಗಳು ಕೇಳಿಬಂದಿದೆ.

ನಗರದ ಬಹುತೇಕ ಹಳೆಯ ಹಾಗೂ ಹೊಸ ಬಡಾವಣೆಗಳು, ಕಾಲನಿಗಳು ಮತ್ತು ಹೊಸದಾಗಿ ನಿರ್ಮಿಸಿರುವ ಲೇಔಟ್‌ಗಳ ರಸ್ತೆಯ ಜಾಗಗಳು ಒತ್ತುವರಿಯಾಗಿವೆ. ಮನೆಗಳ ಮೆಟ್ಟಿಲು, ಮುಂಭಾಗದ ಕಟ್ಟಡ, ಶೆಡ್ ಸೇರಿದಂತೆ ವಿವಿಧ ನಿರ್ಮಾಣಗಳನ್ನು ರಸ್ತೆ ಜಾಗದ ವರೆಗೆ ವಿಸ್ತರಿಸಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಕೆಲವೆಡೆ 30 ಅಡಿ ಅಗಲದ ರಸ್ತೆಗಳು ಕಿರಿದಾಗಿವೆ.

ಪ್ರಮುಖ ಬಡಾವಣೆಗಳಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ನಿಗದಿತ ಅಂತರ ಕಾಯ್ದುಕೊಳ್ಳದೆ ರಸ್ತೆ ಜಾಗ ಬಳಸಿಕೊಂಡಿರುವ ಪ್ರಕರಣಗಳು ಕಂಡುಬರುತ್ತಿವೆ. ಕೆಲವರು ಮನೆಗಳ ಮೆಟ್ಟಿಲು, ತಡೆಗೋಡೆ ಹಾಗೂ ಇತರ ನಿರ್ಮಾಣಗಳನ್ನು ರಸ್ತೆ ಮೇಲೆ ನಿರ್ಮಿಸಿರುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

ವಿಶೇಷವಾಗಿ ಕಿರಿದಾದ ರಸ್ತೆಗಳಲ್ಲಿನ ಇಂತಹ ಒತ್ತುವರಿಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗುವುದಲ್ಲದೆ, ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ತೊಂದರೆ ಆಗುತ್ತಿದೆ. ರಸ್ತೆ ವಿಸ್ತರಣೆ ಅಥವಾ ಅಭಿವೃದ್ಧಿ ಕಾಮಗಾರಿ ಕೈಗೊಂಡಾಗಲೂ ಒತ್ತುವರಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಸರ್ವೇ ನಡೆಸಿ ತೆರವುಗೊಳಿಸಿ

ನಗರದಲ್ಲಿನ ಪ್ರಮುಖ ಬಡಾವಣೆಗಳ ರಸ್ತೆಗಳನ್ನು ಸಮಗ್ರವಾಗಿ ಸರ್ವೆ ಮಾಡಬೇಕು. ದಾಖಲೆಗಳ ಪ್ರಕಾರ ರಸ್ತೆ ಜಾಗ ಎಷ್ಟು, ವಾಸ್ತವದಲ್ಲಿ ಲಭ್ಯವಿರುವ ಜಾಗ ಎಷ್ಟು ಎಂಬುದನ್ನು ಗುರುತಿಸಿ, ಒತ್ತುವರಿ ಕಂಡುಬಂದಲ್ಲಿ ಯಾವುದೇ ರಾಜಕೀಯ ಒತ್ತಡ, ಪ್ರಭಾವಕ್ಕೆ ಮಣಿಯದೆ ತೆರವುಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸರ್ಕಾರಿ ಭೂಮಿ ರಕ್ಷಣೆಗೆ ಕೈಗೊಂಡಿರುವ ಕ್ರಮದ ಮುಂದುವರಿದ ಭಾಗವಾಗಿ, ಸಾರ್ವಜನಿಕರ ಸಂಚಾರಕ್ಕೆ ಮೀಸಲಾದ ರಸ್ತೆ ಜಾಗವನ್ನು ರಕ್ಷಿಸುವ ಕಾರ್ಯಕ್ಕೂ ಜಿಲ್ಲಾಡಳಿತ ಆದ್ಯತೆ ನೀಡಬೇಕು ಎಂಬ ಒತ್ತಾಯ ಇದೀಗ ಬಲಗೊಂಡಿದೆ.

ರಸ್ತೆ ಅತಿಕ್ರಮಣ ತೆರವುಗೊಳಿಸುವ ಕೆಲಸವಷ್ಟೇ ಮಾಡದೆ ಅತಿಕ್ರಮಣಕಾರರ ಮೇಲೆ ಪ್ರಕರಣ ದಾಖಲಿಸಿ, ಕಾನೂನು ಕ್ರಮಕ್ಕೆ ಮುಂದಾಗಬೇಕು. ಮತ್ತೆ ಬೇರೆ ಯಾರೂ ಸರ್ಕಾರಿ ಜಾಗದ ಕಡೆ ಕಣ್ಣು ಹಾಯಿಸದಂತೆ ಕ್ರಮ ವಹಿಸಬೇಕು ಎಂದು ತಿಲಕ್‌ನಗರ ಹಿರಿಯ ನಾಗರಿಕರಾದ ವಾಸುದೇವರಾವ್ ಆಗ್ರಹಿಸಿದ್ದಾರೆ.