ಶಾಸಕ ಸತೀಶ ಸೈಲ್ ನಿವಾಸಕ್ಕೆ ಇಡಿ ದಾಳಿ

KannadaprabhaNewsNetwork |  
Published : Aug 14, 2025, 01:00 AM IST
ಕಾರವಾರದಲ್ಲಿನ ಶಾಸಕ ಸತೀಶ ಸೈಲ್ ನಿವಾಸಕ್ಕೆ ಇಡಿ ದಾಳಿ ನಡೆಸಿರುವುದು. | Kannada Prabha

ಸಾರಾಂಶ

ಅಕ್ರಮ ಅದಿರು ಸಾಗಾಟದ ಆರೋಪದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ 7 ವರ್ಷ ಶಿಕ್ಷೆಗೊಳಗಾಗಿ, ಹೈಕೋರ್ಟಿನಿಂದ ಜಾಮೀನು ಪಡೆದಿರುವ ಸೈಲ್ ಗೆ ಈಗ ಇಡಿ ಶಾಕ್ ನೀಡಿದೆ.

ಕಾರವಾರ: ಸ್ಥಳೀಯ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಅವರ ಸದಾಶಿವಗಡದಲ್ಲಿನ ನಿವಾಸದ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಅದಿರು ಸಾಗಾಟದ ಆರೋಪದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ 7 ವರ್ಷ ಶಿಕ್ಷೆಗೊಳಗಾಗಿ, ಹೈಕೋರ್ಟಿನಿಂದ ಜಾಮೀನು ಪಡೆದಿರುವ ಸೈಲ್ ಗೆ ಈಗ ಇಡಿ ಶಾಕ್ ನೀಡಿದೆ.

ಬೆಂಗಳೂರು ಹಾಗೂ ಗೋವಾದಿಂದ ಆರು ವಾಹನಗಳಲ್ಲಿ ಆಗಮಿಸಿದ ಭದ್ರತಾ ಸಿಬ್ಬಂದಿ ಸೇರಿ 24 ಅಧಿಕಾರಿಗಳು ಬೆಳಿಗ್ಗೆ ಸೈಲ್ ನಿವಾಸ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಸೈಲ್, ಅವರ ಪತ್ನಿ ಬೆಂಗಳೂರಿನಲ್ಲಿದ್ದರು. ಮನೆಯ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿಯ ಮೂಲಕ ಗೇಟ್ ತೆರವು ಮಾಡಿ, ಮನೆಯಲ್ಲಿದ್ದ ಕೆಲಸಗಾರರಿಗೆ ಮಾಹಿತಿ ನೀಡಿ ಮನೆಯೊಳಕ್ಕೆ ಪ್ರವೇಶಿಸಿದರು. ಶಿವಮೊಗ್ಗದಿಂದ ಆಗಮಿಸಿದ ಸಿಐಎಸ್‌ಎಫ್ ಭದ್ರತಾ ಸಿಬ್ಬಂದಿಯ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ಆರಂಭಿಸಿದರು. ದಾಳಿಯ ಬಗ್ಗೆ ಇಡಿ ಅಧಿಕಾರಿಗಳು ಸೈಲ್ ಗೆ ಮಾಹಿತಿ ನೀಡಿದರು.

ಬೆಳಿಗ್ಗೆಯಿಂದ ಸಂಜೆ ತನಕ ದಾಖಲೆಗಳನ್ನೆಲ್ಲ ಜಾಲಾಡಿದ ಅಧಿಕಾರಿಗಳು ಅವುಗಳನ್ನೆಲ್ಲ ಪರಿಶೀಲನೆ ನಡೆಸಿದರು. ತಿಂಡಿ ಹಾಗೂ ಊಟಕ್ಕೆ ಹೊರಕ್ಕೆ ಹೋಗದ ಇಡಿ ಅಧಿಕಾರಿಗಳು ಸೈಲ್ ನಿವಾಸಕ್ಕೇ ತಿಂಡಿ, ಊಟ ತರಿಸಿಕೊಂಡರು.

ಸತೀಶ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಅಕ್ರಮ ಅದಿರು ವಹಿವಾಟು ನಡೆಸಿದ ಬಗ್ಗೆ ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಹಾಕಿತ್ತು. ಜನಪ್ರತಿನಿಧಿಗಳ ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಸಂತೋಷ ಗಜಾನನ ಭಟ್, ಸತೀಶ ಸೈಲ್ ಗೆ 7 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು. ನಂತರ ಸೈಲ್ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಕಾರಾಗೃಹದಿಂದ ಹೊರಬಂದರು. ಇದೀಗ ಅಕ್ರಮ ಅದಿರು ವಹಿವಾಟಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸೈಲ್ ನಿವಾಸದ ಮೇಲೆ ಇಡಿ ದಾಳಿಯಾದ ಸುದ್ದಿ ಮಿಂಚಿನಂತೆ ಹರಡಿದ್ದರೂ ಸೈಲ್ ಬೆಂಬಲಿಗರಾಗಲಿ, ಅಭಿಮಾನಿಗಳಾಗಲಿ ಸೈಲ್ ನಿವಾಸದತ್ತ ಸುಳಿಯಲಿಲ್ಲ. ಅವರ ಮನೆಯ ಗೇಟ್ ಹೊರಗಡೆ ಸುದ್ದಿ ಮಾಧ್ಯಮದವರನ್ನು ಹೊರತು ಪಡಿಸಿದರೆ ಉಳಿದವರಾರೂ ಕಂಡುಬರಲಿಲ್ಲ. ಇದರಿಂದ ನಿರಾತಂಕವಾಗಿ ಇಡಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!