ಕೊಪ್ಪಳ:
ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಪ್ರಕಟವಾಗುತ್ತಿರುವ ಕನ್ನಡಪ್ರಭ ಯುವ ಆವೃತ್ತಿ ವಿದ್ಯಾರ್ಥಿಗಳ ಜ್ಞಾನಾರ್ಜನೆ ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ ಎಂದು ಕಾಳಿದಾಸ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಂಬಣ್ಣ ನಂದ್ಯಾಪುರ ಹೇಳಿದರು.ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ಕನ್ನಡಪ್ರಭ ಯವ ಆವೃತ್ತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಮಾಡಿರುವ ಕನ್ನಡಪ್ರಭ ಯುವ ಆವೃತ್ತಿ ತಪ್ಪಿಸಬಾರದು. ಪರೀಕ್ಷೆಯ ದೃಷ್ಟಿಯಿಂದ ಅನೇಕ ಮಾಹಿತಿ ನೀಡಿದ್ದು ಅಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.
ಮುಖ್ಯಶಿಕ್ಷಕ ರಾಮಣ್ಣ ಡಿ. ಅಲ್ಮರ್ಸಿಕೇರಿ ಮಾತನಾಡಿ, ಕನ್ನಡಪ್ರಭ ಯುವ ಆವೃತ್ತಿಯನ್ನು ಶಾಲೆಗೆ ನಿರಂತರವಾಗಿ ತರಿಸುತ್ತಿದ್ದು ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.ಕನ್ನಡಪ್ರಭ ಸಾಮಾಜಿಕ ಚಿಂತನೆಗಳನ್ನು ಹೊಂದಿದ್ದು ಬಡ ವಿದ್ಯಾರ್ಥಿಗಳ ಕುರಿತು ಅನೇಕ ವರದಿ ಪ್ರಕಟಿಸಿ ಅದೇಷ್ಟು ಮಕ್ಕಳಿಗೆ ಮೆಡಿಕಲ್ ಓದಲು ಆರ್ಥಿಕ ನೆರವು ದೊರಕಿಸಿಕೊಟ್ಟ ಹಿರಿಮೆ ಈ ಪತ್ರಿಕೆಗೆ ಸಲ್ಲುತ್ತದೆ ಎಂದು ಹೇಳಿದರು.
ಜಿಲ್ಲೆಯ ಸಮಸ್ಯೆಗಳ ಕುರಿತು ವಿಶೇಷ ವರದಿ ಪ್ರಕಟಿಸಿ ಬೆಳಕು ಚೆಲ್ಲಿದೆ. ಸದಾ ಸಮಾಜಮುಖ ವರದಿಗಳನ್ನು ಬಿತ್ತರಿಸುವ ಮೂಲಕ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಕನ್ನಡಪ್ರಭ ಬಳಗದಿಂದ ಸನ್ಮಾನ ಸ್ವೀಕರಿಸಿದ ಯುವ ಆವೃತ್ತಿಯ ಪ್ರಾಯೋಜಕತ್ವ ವಹಿಸಿಕೊಂಡಿರುವ ಮಲ್ಲೇಶ ಹದ್ದೀನ್, ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಗಳು ಇದ್ದು ಅವರಿಗೆ ಅವಕಾಶ ಒದಗಿಸಿಕೊಡಬೇಕು. ನಮ್ಮ ಏರಿಯಾದಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಮಕ್ಕಳು ಶಾಲೆಯಿಂದ ದೂರವೇ ಉಳಿಯುತ್ತಿದ್ದರು. ಅವರನ್ನು ಇದೀಗ ಶಾಲೆಗೆ ಸೇರಿಸಿದ್ದೇವೆ ಎಂದರು.
ಬಡ ಮಕ್ಕಳಿಗೆ ಕಾಳಿದಾಸ ಶಿಕ್ಷಣ ಸಂಸ್ಥೆ ವರದಾನವಾಗಿದೆ. ನಾನು ಸಹ ಇದೇ ಶಾಲೆಯಲ್ಲಿ ಓದಿದ್ದೇನೆ. ಶಾಲೆಯಲ್ಲಿ ಕಲಿತ ನಾಲ್ಕು ಅಕ್ಷರವೇ ಜೀವನಕ್ಕೆ ದಾರಿಯಾಗಿದ್ದು, ಈ ಅಲ್ಪ ಸೇವೆ ಮಾಡುತ್ತಿದ್ದೇನೆ ಎಂದ ಅವರು, ಶಾಲೆಯಿಂದ ಯಾವ ಮಕ್ಕಳು ಹೊರಗುಳಿಯಬಾರದು. ಅವರಿಗೆ ಸಹಾಯ ಮಾಡಿ ಶಾಲೆಗೆ ಸೇರಿಸುವ ಸಹಕಾರಕ್ಕೆ ಕಾಳಿದಾಸ ಶಿಕ್ಷಣ ಸಂಸ್ಥೆ ದೊಡ್ಡ ಆಸರೆಯಾಗಿದೆ ಎಂದರು.ಕನ್ನಡಪ್ರಭ ಹಿರಿಯ ವಿಶೇಷ ವರದಿಗಾರ ಸೋಮರಡ್ಡಿ ಅಳವಂಡಿ, ಪ್ರಸರಣ ವಿಭಾಗದ ಈಶ್ವರ ಶೀಲವಂತರ, ಪ್ರಾಚಾರ್ಯರಾದ ನಾಗನಗೌಡ ಆರ್. ಮುಖ್ಯಶಿಕ್ಷಕರಾದ ಟಿ. ಗೋವಿಂದಪ್ಪ, ಎಸ್.ಸಿ. ಗುಗಲೋತ್ತರ, ವಿಜಯಲಕ್ಷ್ಮಿ ಗದಗ, ಖಜಾವಲಿ ಎಂ., ಬಾಳನಗೌಡ ಇಂದ್ರಮ್ಮನವರ, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಇದ್ದರು.