- ಬೆಂಗಳೂರು, ಶಿವಮೊಗ್ಗ ಸೇರಿ 10 ಸ್ಥಳಗಳಲ್ಲಿ ರೇಡ್ । ಹಲವು ದಾಖಲೆಗಳು ತನಿಖಾ ಸಂಸ್ಥೆ ವಶಕ್ಕೆ- ಸಂಬಂಧಿಕರ ಹೆಸರಿನಲ್ಲಿ ಸಂಪಾದನೆ ಮಾಡಿದ್ದ ಆಸ್ತಿಯ ದಾಖಲೆಗಳು ಶೋಧ ವೇಳೆ ಪತ್ತೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರು. ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಬೆಂಗಳೂರು ಮತ್ತು ಶಿವಮೊಗ್ಗ ಸೇರಿ 10 ಸ್ಥಳಗಳ ಮೇಲೆ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬೆಂಗಳೂರಿನಲ್ಲಿ ಒಂಬತ್ತು ಕಡೆ ಮತ್ತು ಶಿವಮೊಗ್ಗದಲ್ಲಿ ಒಂದು ಕಡೆ ದಾಳಿ ನಡೆಸಲಾಗಿದೆ. ಶುಕ್ರವಾರ ಬೆಳಗ್ಗೆ ಈ ಹಿಂದೆ ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ.ನಾಗರಾಜಪ್ಪ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ಅವರಿಗೆ ಸೇರಿದ ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ವಿಜಯನಗರದಲ್ಲಿರುವ ನಾಗರಾಜಪ್ಪ ಮತ್ತು ಜಾಲಹಳ್ಳಿಯಲ್ಲಿರುವ ಲೀಲಾವತಿಯವರ ನಿವಾಸ ಸೇರಿ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಇದೇ ವೇಳೆ ಭೋವಿ ನಿಗಮದ ಅಧೀಕ್ಷಕರಾಗಿದ್ದ ಪಿ.ಡಿ.ಸುಬ್ಬಪ್ಪ ಅವರ ಸರಸ್ವತಿ ನಗರದಲ್ಲಿನ ನಿವಾಸದಲ್ಲೂ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.
ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರು. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವ ಆರೋಪ ಇತ್ತು. ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
- ಭೋವಿ ಅಕ್ರಮ: 3 ತಿಂಗಳಲ್ಲಿ ತನಿಖೆ ಮುಗಿಸಲು ಸಿಐಡಿಗೆ ನಿರ್ದೇಶನ
ಭೋವಿ ಅಭಿವೃದ್ಧಿ ನಿಗಮದ ಮೂಲಕ ಸರ್ಕಾರದ ಅನುದಾನ ಬಡವರಿಗೆ ಹೋಗಬೇಕಿತ್ತು. ಆದರೆ, ಆ ಹಣವನ್ನೂ ನುಂಗಿಬಿಟ್ಟರೆ ಮತ್ತೇನು ಹೇಳೋಣ? ಸರ್ಕಾರ ಸಹ ಇಂತಹ ಅವ್ಯವಹಾರ ಪ್ರಕರಣದಲ್ಲಿ ಅರ್ಧಂಬರ್ಧ ತನಿಖೆ ನಡೆಸುತ್ತದೆ. ಯಾಕೆ ಇಂಥ ತನಿಖೆ ನಡೆಸಲಾಗುತ್ತಿದೆ ಎಂಬುದೇ ಅರ್ಥವಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.ಪ್ರಕರಣ ಸಂಬಂಧ 2022ರಲ್ಲಿ ತಮ್ಮ ವಿರುದ್ಧ ದೊಡ್ಡಬಳ್ಳಾಪುರ ಟೌನ್ ಠಾಣೆ, ಬೆಂಗಳೂರಿನ ಜಯನಗರದ ಸಿದ್ದಾಪುರ ಠಾಣೆ ಸೇರಿ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಡಾ.ಬಿ.ಕೆ.ನಾಗರಾಜಪ್ಪ ಸೇರಿ ಮತ್ತಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸಿಐಡಿಗೆ ಈ ನಿರ್ದೇಶನ ನೀಡಿದೆ.
ತನಿಖೆಗೆ ಅನುಮತಿಸುವುದು ಸೂಕ್ತ:ಭೋವಿ ಸಮುದಾಯ ಜನರಿಗೆ ನಿಗಮ ಬಿಡುಗಡೆಗೊಳಿಸಲು ಉದ್ದೇಶಿಸಿದ್ದ 80 ಕೋಟಿ ರು. ಅನುದಾನ ದುರ್ಬಳಕೆ ಹಾಗೂ ವಂಚಿಸಿರುವ ಆರೋಪ ಅರ್ಜಿದಾರರ ಮೇಲಿದೆ. ಸಿಐಡಿ ತನಿಖೆ ಅಂತಿಮ ಹಂತದಲ್ಲಿದೆ. ಆರೋಪಿಯಾಗಿರುವ ಡಾ.ಬಿ.ಕೆ.ನಾಗರಾಜಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಆ ನಂತರವೇ ತನಿಖೆ ಪೂರ್ಣಗೊಳ್ಳಲಿದೆ. ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಭಿಯೋಜಕ ಬಿ.ಎನ್.ಜಗದೀಶ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ವೇಳೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಹಾಗೂ ಕಾನೂನು ಪ್ರಕಾರ ತನಿಖೆ ನಡೆಸಿ ಕ್ರಮ ಜರುಗಿಸುವ ಮುಕ್ತ ಅವಕಾಶ ತನಿಖಾಧಿಕಾರಿಗಳಿಗೆ ಇರುತ್ತದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.