ಕನ್ನಡಪ್ರಭ ವಾರ್ತೆ ತುರುವೇಕೆರೆ
ಎಲ್ಲಾ ದಾನಗಳಿಗಿಂತ ಅನ್ನದಾನವೇ ಶ್ರೇಷ್ಠವಾದುದು ಎಂದು ನವಲಗುಂದದ ಬಸವಲಿಂಗ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಎಡಿಯೂರು ಸಿದ್ದಲೀಂಗೇಶ್ವರಸ್ವಾಮಿ ಪಾದಯಾತ್ರಿಗಳ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ 50 ನೇ ವರ್ಷದ ಪಾದಯಾತ್ರೆಗಳಿಗೆ ಏರ್ಪಡಿಸಲಾಗಿದ್ದ ಅನ್ನದಾಸೋಹ ಕಾರ್ಯಕ್ರಮ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಎಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯವರ ದರ್ಶನಕ್ಕಾಗಿ ಗದಗ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಗ್ರಾಮದಿಂದ ಎಡಿಯೂರು ಸಿದ್ದಲಿಂಗಸ್ವಾಮಿಯ ದೇವಾಲಯದ ತನಕ ಸುಮಾರು 450 ಕಿಮೀ ಆಗಲಿದೆ. ನಮ್ಮ ಪಾದಯಾತ್ರೆ ನ. 5ರಿಂದ ಪ್ರಾರಂಭವಾಗಿದೆ. ನಮ್ಮ ಪಾದಯಾತ್ರಿಗಳಿಗೆ ಭಕ್ತರು ಊಟ, ಉಪಹಾರ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಎಲ್ಲರೂ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ. ಪಾದಯಾತ್ರಿಗಳು ಮಾಡುವ ಸತ್ಕಾರ್ಯದಲ್ಲಿ ತಾವೂ ಸಹ ಭಾಗಿಯೋಗೋಣ ಎಂಬ ಅಭಿಲಾಷೆಯಿಂದ ಭಕ್ತರು ಸಕಾಲಕ್ಕೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ನೀಡಿ ಕೃತಾರ್ಥರಾಗುತ್ತಿದ್ದಾರೆ. ಇದೊಂದು ಸತ್ಕಾರ್ಯವಾಗಿದೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು.ಈ ಸಂಧರ್ಭದಲ್ಲಿ ಬಹಳ ವರ್ಷಗಳಿಂದ ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವ ಹಿರಿಯರಾದ 11 ಮಂದಿಯನ್ನು ಪಾದಯಾತ್ರಿಗಳ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬ್ಯಾಂಕ್ ಮೂಡಲಗಿರಯ್ಯ, ಗೌರವಾಧ್ಯಕ್ಷ ಸಿ.ಎ.ರಂಗಯ್ಯ, ಅಧ್ಯಕ್ಷ ಯಜಮಾನ್ ಮಹೇಶ್, ಉಪಾಧ್ಯಕ್ಷ ಕೈಲಾಸಂ, ಕಾರ್ಯದರ್ಶಿ ಸಿದ್ದಲಿಂಗಸ್ವಾಮಿ, ಖಜಾಂಚಿ ಯೋಗೀಶ್, ಮುಖಂಡರಾದ ಎಂ.ಡಿ.ಲಕ್ಷ್ಮೀನಾರಾಯಣ್, ಎನ್. ಆರ್.ಜಯರಾಮ್, ಎಂ.ಡಿ.ಮೂರ್ತಿ, ಕುಮಾರಸ್ವಾಮಿ, ಲಯನ್ಸ್ ನ ರಂಗನಾಥ್, ನಟೇಶ್, ಚಂದ್ರಣ್ಣ, ಶಿವಾನಂದ್, ಯದುಕುಮಾರ್, ತೀರ್ಥಕುಮಾರ್, ಸೀರ್ಸಿ ಸಮಾಜದ ಮುಖಂಡರಾದ ಜಗರಾಮ್, ಮಲಾರಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಟೇಶ್ ಸ್ವಾಗತಿಸಿದರು. ಕೈಲಾಸಂ ನಿರೂಪಿಸಿದರು. ಯಜಮಾನ್ ಮಹೇಶ್ ವಂದಿಸಿದರು.