ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ
ಕನ್ನಡಪ್ರಭ ವಾರ್ತೆ ಕುಷ್ಟಗಿರೋಬೋಗಿಂತಲೂ ನಾವೇನೂ ಕಮ್ಮಿಯಿಲ್ಲ ಎಂಬಂತೆ ಮಕ್ಕಳಲ್ಲಿ ಅತ್ಯುತ್ತಮವಾದ ಮೌಲ್ಯಗಳನ್ನು ತುಂಬುವುದರೊಂದಿಗೆ ಪಾಠಬೋಧನೆ ಮಾಡಬೇಕು ಎಂದು ಮೈಸೂರಿನ ಸೆಂಟ್ ಫೀಲೋಮೀನಾ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ ಹೇಳಿದರು.
ಪಟ್ಟಣದ ಕ್ರೈಸ್ತ್ ದಿ ಕಿಂಗ್ ಶಾಲೆಯಲ್ಲಿ ನಡೆದ ಕುಷ್ಟಗಿ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಉಪನ್ಯಾಸವನ್ನು ನೀಡಿ ಅವರು ಮಾತನಾಡಿದರು.ಪ್ರಪಂಚದಲ್ಲಿ ತಂತ್ರಜ್ಞಾನ ಮುಂದುವರೆದಿದ್ದು, ಮುಂದಿನ ದಿನಮಾನಗಳಲ್ಲಿ ಶಿಕ್ಷಕರ ಬದಲಿಗೆ ರೋಬೋಗಳ ಮೂಲಕ ಮಕ್ಕಳಿಗೆ ಪಾಠವನ್ನು ಕಲಿಸುವಂತಹ ಸ್ಥಿತಿ ಬರಬಹುದು. ಆದ ಕಾರಣ ಶಿಕ್ಷಕರಾದವರು ಉತ್ತಮ ಆದರ್ಶಗಳೊಂದಿಗೆ ಕೆಲಸ ನಿರ್ವಹಿಸಬೇಕು ಎಂದರು.ಅನ್ಯ ದೇಶಕ್ಕಿಂತ ನಮ್ಮ ದೇಶದಲ್ಲಿ ಶಿಕ್ಷಣ ಹಾಗೂ ಶಿಕ್ಷಕರಿಗೆ ಉತ್ತಮವಾದ ಗೌರವ ಇದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಹೋಗುವ ಹೊಣೆ ನಮ್ಮದಾಗಿದೆ. ಶಿಕ್ಷಕರ ನಡವಳಿಕೆಗಳು, ಮಾತುಗಳು ಶುದ್ಧವಾಗಿರಬೇಕು. ಹೇಳಿಕೊಡುವಂತಹ ಮೌಲ್ಯಗಳು ಮಕ್ಕಳ ಹೃದಯದಲ್ಲಿ ನೆಲೆಸುವಂತಾಗಬೇಕು. ಈ ದೇಶದ ಹಣೆಬರಹವನ್ನು ಬರೆಯುವಂತವರು ಶಾಲಾ ಶಿಕ್ಷಕರು ಅವರು ಯಾವುದೇ ಕಾರಣಕ್ಕೂ ತಪ್ಪನ್ನು ಮಾಡಬಾರದು. ಮಕ್ಕಳ ಶೈಕ್ಷಣಿಕ ಜೀವನದ ಉದ್ಧಾರಕ್ಕಾಗಿ ಶ್ರಮವಹಿಸಿ ಕೆಲಸ ಮಾಡಿದಾಗ ಮಾತ್ರ ನಮ್ಮ ಶಿಕ್ಷಕರ ಜನ್ಮ ಸಾರ್ಥಕವಾಗುತ್ತದೆ ಎಂದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಮಾತನಾಡಿ, ಶಿಕ್ಷಕ ಹುದ್ದೆಗೆ ಆದಾಯ ಕಡಿಮೆ ಇರಬಹುದು. ಆದರೆ ಅದಕ್ಕಿಂತ ಉನ್ನತ ಸ್ಥಾನ ಮತ್ತೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಳನೇ ವೇತನ ಜಾರಿಗೆ ತರುವ ಮೂಲಕ ಹೆಚ್ಚು ಸಂಬಳ ಪಡೆಯುವಂತೆ ಮಾಡಿದ್ದಾರೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಮಾತನಾಡಿ, ರಾಜ್ಯದ ಮೂಲೆಯಲ್ಲಿ ಎಲ್ಲೊ ಒಬ್ಬ ಶಿಕ್ಷಕ ತಪ್ಪು ಮಾಡಿದ್ದಾನೆ ಎಂಬ ಕಾರಣಕ್ಕೆ ಎಲ್ಲ ಶಿಕ್ಷಕರು ತಪ್ಪು ಮಾಡೋದಿಲ್ಲ ಹಾಗೂ ಶಿಕ್ಷಕ ವೃತ್ತಿಗೆ ಕಳಂಕ ಅಂಟುವುದಿಲ್ಲ. ಎಂದೆಂದಿಗೂ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಣ ನೀಡುವ ಶಿಕ್ಷಕರು ಜಗತ್ತಿಗೆ ಹೀರೊ, ಅನ್ನ ನೀಡುವ ರೈತ ಜಗತ್ತಿಗೆ ಹೀರೊ. ಜನ್ಮ ಕೊಟ್ಟ ತಂದೆ-ತಾಯಿ ಹೀರೋಗಳಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು.ಪ್ರಾಸ್ತಾವಿಕವಾಗಿ ಬಿಇಒ ಸುರೇಂದ್ರ ಕಾಂಬಳೆ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಮೆಣೆದಾಳ ಸ್ವಾಗತಿಸಿದರು. ಈ ಸಂದರ್ಭ ತಾಪಂ ಇಒ ಪಂಪಾಪತಿ ಹಿರೇಮಠ, ನೌಕರರ ಸಂಘದ ತಾಲೂಕಾಧ್ಯಕ್ಷ ಬಾಲಾಜಿ ಬಳಿಗಾರ, ದೈಹಿಕ ಪರೀವಿಕ್ಷಕಿ ಎಂ. ಸರಸ್ವತಿ, ರೇವರೆಂಡ್ ಫಾದರ್ ಜಾನ್ ಪೀಟರ, ಜಗದೀಶ ಸೂಡಿ, ಸಿದ್ರಾಮಪ್ಪ ಅಮರಾವತಿ, ಗುರಪ್ಪ ಕುರಿ, ಶರಣಪ್ಪ ಕೆ, ದಾವಲಸಾಬ ವಾಲೀಕಾರ, ಮಹಾದೇವಪ್ಪ ಗೊಣ್ಣಾಗರ, ನೀಲನಗೌಡ ಹೊಸಗೌಡ್ರ, ಮಲ್ಲಪ್ಪ ಕುದರಿ, ನಿಂಗನಗೌಡ ಪಾಟೀಲ, ಸುಭಾನಸಾಬ ನದಾಫ್ ,ಶ್ರೀಧರ ದೇಸಾಯಿ, ಸೋಮನಗೌಡ ಪಾಟೀಲ, ಹೈದರಲಿ ಜಾಲಿಹಾಳ, ಶಾಕೀರಬಾಬಾ, ಶಿವಪ್ಪ ವಾಗ್ಮೋರೆ, ಗವಿಸಿದ್ದಪ್ಪ ನಾಗಲೀಕರ, ಶೇಖರ ಮೇಟಿ, ಯಮನಪ್ಪ ಚೂರಿ,ಶಿವಶಂಕರ ಸೇರಿದಂತೆ ತಾಲೂಕಿನ ಶಿಕ್ಷಕರು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.ಡಾ. ಜೀವನಸಾಬ ಬಿನ್ನಾಳ ಹಾಗೂ ಶರಣಪ್ಪ ತೆಮ್ಮಿನಾಳ ನಿರೂಪಿಸಿದರು.
ಏಳು ಶಾಲೆಗಳಿಗೆ ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್‌ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು. ಇದೇ ಸಂದರ್ಭ ನಿವೃತ್ತ ಶಿಕ್ಷಕರಿಗೆ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.