ಮಕ್ಕಳಿಗೆ ಶಿಕ್ಷಣ ಕೊಡಿಸಿ ಸುಶಿಕ್ಷಿತರನ್ನಾಗಿ ರೂಪಿಸಿ: ಸುರೇಶ್

KannadaprabhaNewsNetwork |  
Published : Aug 13, 2025, 02:31 AM IST
ವಿಶ್ವ ಬುಡಕಟ್ಟು ದಿನಾಚರಣೆ- 2025 | Kannada Prabha

ಸಾರಾಂಶ

ಬ್ಯಾಡಗೊಟ್ಟ ಗ್ರಾಮದ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ವಿಶ್ವ ಬುಡಕಟ್ಟು ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ ವತಿಯಿಂದ ಕೂಡಿಗೆ ಗ್ರಾಮ ಪಂಚಾಯಿತಿ ಹಾಗೂ ಬಸವನಹಳ್ಳಿಯಲ್ಲಿರುವ ತಾಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಸಹಯೋಗದೊಂದಿಗೆ ಬ್ಯಾಡಗೊಟ್ಟ ಗ್ರಾಮದ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಜಿಲ್ಲಾಮಟ್ಟದ ವಿಶ್ವ ಬುಡಕಟ್ಟು ದಿನಾಚರಣೆ- 2025 ಆಚರಣೆ ನಡೆಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವನಹಳ್ಳಿ ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷೆ ಕಾವೇರಿ, ಆದಿವಾಸಿಗಳು ತಮ್ಮ ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.

ಮುಖ್ಯ ಭಾಷಣ ಮಾಡಿದ ಐ. ಎ. ಎಸ್ . ಸಿವಿಲ್ ಪರೀಕ್ಷೆಯನ್ನು ತೆಗೆದುಕೊಂಡಿರುವ. ಬುಡಕಟ್ಟು ಜನಾಂಗದ ಯುವಕ ಪ್ರತಿಭಾವಂತ ವಿದ್ಯಾರ್ಥಿ ಜೆ.ಜಿ. ಸುರೇಶ್ ಮಾತನಾಡಿ, ಬುಡಕಟ್ಟು ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸುಶಿಕ್ಷಿತರನ್ನಾಗಿ ರೂಪಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.

ಪ್ರಕೃತಿಯನ್ನು ಉಳಿಸುತ್ತಿರುವುದು ಹೆಮ್ಮೆಯ ಸಂಗತಿ:

ದೇಶದಲ್ಲೇ ವಿಶಿಷ್ಟ ಕಲೆ, ಸಂಸ್ಕೃತಿ, ಆಚಾರ ವಿಚಾರ, ಕಲೆಗಳು ಹಾಗೂ ಆಹಾರ ಪದ್ಧತಿಯನ್ನು ಹೊಂದಿರುವ ಬುಡಕಟ್ಟು ಜನಾಂಗವು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪ್ರಕೃತಿಯನ್ನು ಉಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಯಾವುದೇ ಆಧುನಿಕತೆಯ ಭರಾಟೆಯಲ್ಲಿ ಯಾವುದೇ ಕಾರಣಕ್ಕೂ‌ ಬುಡಕಟ್ಟು ಕಲೆ, ಸಂಸ್ಕೃತಿಯು ನಾಶವಾಗದಂತೆ ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಸುರೇಶ್ ಮನವಿ ಮಾಡಿದರು.ಪ್ರಪಂಚದ 90 ದೇಶಗಳಲ್ಲಿ ಸುಮಾರು 400 ರಿಂದ 500 ರಷ್ಟು ಮಿಲಿಯನ್ ಬುಡಕಟ್ಟು ಜನಾಂಗದವರು ಜೀವಿಸುತ್ತಿದ್ದಾರೆ. ಇವರಲ್ಲಿ ವಿಶ್ವದ ಜನಸಂಖ್ಯೆಗೆ ಹೋಲಿಸಿದರೆ 6.2% ರಷ್ಟು ಜನ ಬುಡಕಟ್ಟು ಸಮುದಾಯಕ್ಕೆ ಬರುತ್ತಾರೆ, ಹಾಗೂ ಏಳು ಸಾವಿರಕ್ಕೂ ಹೆಚ್ಚು ವಿವಿಧ ಭಾಷೆಗಳನ್ನು ಮಾತನಾಡುವ ಸಮುದಾಯಗಳಿವೆ ಎಂದು ತಿಳಿಸಿದರು.ಮೊದಲನೆಯದಾಗಿ ಶಿಕ್ಷಿತರಾಗಬೇಕು:

ಸಮುದಾಯದವರು ಸಂವಿಧಾನದ ಹಕ್ಕುಗಳ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಪಡೆಯಲು ಮೊದಲನೆಯದಾಗಿ ಶಿಕ್ಷಿತರಾಗಬೇಕು, ಶಿಕ್ಷಣದ ಮೂಲಕ ತನ್ನ ಸಂವಿಧಾನ ಬದ್ದ ಹಕ್ಕುಗಳನ್ನು ಪಡೆಯುವುದರ ಜೊತೆಯಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಮುಂದುವರೆಯುಲು ಸಾಧ್ಯವಾಗುವುದು, ಅಲ್ಲದೇ ಬುಡಕಟ್ಟು ಸಮುದಾಯದವರು ಶಿಕ್ಷಣ, ಉದ್ಯೋಗ, ರಾಜ್ಯಾಧಿಕಾರ ಮತ್ತು ಮಹಿಳಾ ಸಬಲೀಕರಣ. ಈ ನಾಲ್ಕು ಅಂಶಗಳನ್ನು ಅರಿತುಕೊಳ್ಳಲು ಪ್ರಮುಖವಾಗಿ ಸಮುದಾಯದವರು ಶಿಕ್ಷಿತರಾಗಬೇಕು, ಅದರ ಮುಖೇನ ಸಂವಿಧಾನ ಬದ್ಧ ಹಕ್ಕುಗಳ ಚಾಲನೆ ಮಾಡಿ ಸಮುದಾಯದ ಮೂಲಭೂತ ಸವಲತ್ತುಗಳನ್ನು ಪಡೆಯುವುದರ ಜೊತೆಯಲ್ಲಿ ಉದ್ಯೋಗ, ಆರ್ಥಿಕ ಪರಿಸ್ಥಿತಿ, ರಾಜ್ಯಾಧಿಕಾರ ಮತ್ತು ಮಹಿಳೆಯರು ಸಬಲೀಕರಣದ ಮೂಲಕ ಆಧುನಿಕ ಬದುಕನ್ನು ಕಂಡುಕೊಳ್ಳುವ ಮೂಲಕ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಅನುಕೂಲವಾಗುವುದು ಎಂದು ತಿಳಿಸಿದರು. ಬದುಕನ್ನು ಹಸನಗೊಳಿಸಿಕೊಳ್ಳಬೇಕು:

ಅಧ್ಯಕ್ಷತೆ ವಹಿಸಿದ್ದ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಗಿರೀಶ್ ಮಾತನಾಡಿ, ಶ್ರಮಜೀವಿಗಳಾದ ಬುಡಕಟ್ಟು ಜನಾಂಗದವರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ತಮ್ಮ ಬದುಕನ್ನು ಹಸನಗೊಳಿಸಿ ಕೊಳ್ಳಬೇಕು ಎಂದರು.ಜಿಲ್ಲಾ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ ಬುಡಕಟ್ಟು ಜನಾಂಗದ ಮಕ್ಕಳಲ್ಲಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ರಕ್ಷಣೆಯೊಂದಿಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದೊಂದಿಗೆ ಬುಡಕಟ್ಟು ಜನಾಂಗದ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಬುಡಕಟ್ಟು ದಿನಾಚರಣೆಯನ್ನು ಸಂಘಟಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಬುಡಕಟ್ಟು ಮಕ್ಕಳ ಸಮ್ಮೇಳನ ನಡೆಸಲಾಗುವುದು ಎಂದರು.

ಜಿಲ್ಲಾ ಸ್ಕೌಟ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತಾನಾಡಿ , ಸಮುದಾಯದ ಕೇಂದ್ರದಲ್ಲಿ ಮುಕ್ತದಳ ಆರಂಭಿಸುವ ಮೂಲಕ ‌ ಸಂಘಟನೆಯ ಮಹತ್ವದ ತಿಳಿದುಕೊಳ್ಳುವ ಬಗ್ಗೆ ತಿಳಿಸಿದರು.

ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ , ಸಂಸ್ಥೆಯ ಕಾರ್ಯದರ್ಶಿ ಎಂ.ಎಸ್.ಗಣೇಶ್, ಆದಿವಾಸಿ ರಕ್ಷಣಾ ಪರಿಷತ್ತಿನ ರಾಜ್ಯ ನಿರ್ದೇಶಕ ಬಿ.ಎ..ಗಂಗಾಧರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ.ಹಮೀದ್, ಕೆ.ಎಸ್.ಶಿವಕುಮಾರ್, ಪಿಡಿಓ ಮಂಜುಳಾ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಜಿಲ್ಲಾ ಸ್ಕೌಟ್ಸ್ ನ ತರಬೇತಿ ಆಯುಕ್ತ ಕೆ.ಯು.ರಂಜಿತ್ , ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ವಸಂತಿ , ಜಿಲ್ಲಾ ಸಹಾಯಕ ಗೈಡ್ಸ್ ಆಯುಕ್ತೆ ಸುಲೋಚನ, ಬುಲ್ ಬುಲ್ ವಿಭಾಗದ ಮುಖ್ಯಸ್ಥೆ ಡೈಸಿ, ಸಂಸ್ಥೆಯ ಜಿಲ್ಲಾ ಸಂಘಟಕಿ ಯು. ಸಿ. ದಮಯಂತಿ, ಇಂದಿರಾ ಸೇರಿದಂತೆ ಸ್ಥಳೀಯ ಸಂಸ್ಥೆಯ ನಿರ್ದೇಶಕರು ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದ ಸಮುದಾಯದ ಗ್ರಾಮಸ್ಥರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಮುದಾಯದ ವಿವಿಧ ತಂಡದವರಿಂದ ಸಂಸ್ಕೃತಿಗಳ ಕಾರ್ಯಕ್ರಮಗಳು ನಡೆದವು.ನಂತರ ಸಮುದಾಯದ ವಿವಿಧ ತಂಡದವರಿಂದ ಏರ್ಪಡಿಸಿದ್ದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ಕೆ.ಯು. ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ‌. ಹಮೀದ್ ಸ್ವಾಗತಿಸಿದರು. ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ. ಸುಲೋಚನಾ ವಂದಿಸಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ