ಸವಿತಾ ಸಮಾಜದ ಏಳ್ಗೆಗಾಗಿ ಮಕ್ಕಳಿಗೆ ಶಿಕ್ಷಣ ನೀಡಿ

KannadaprabhaNewsNetwork | Published : Aug 28, 2024 12:46 AM

ಸಾರಾಂಶ

ಚಾಮರಾಜನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಡಪದ ಅಪ್ಪಣ್ಣ ಅವರ 890ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸವಿತಾ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜವನ್ನು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರಬೇಕು ಎಂದು ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರ 890ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರು ಅನುಭವ ಮಂಟಪದ ಉಸ್ತುವಾರಿ ವಹಿಸಿಕೊಂಡಿದ್ದರು. ಅನುಭವ ಮಂಟಪ ಪ್ರವೇಶಿಸುವ ಪ್ರತಿಯೊಬ್ಬರು ದ್ವಾರದಲ್ಲಿರುತ್ತಿದ್ದ ಹಡಪದ ಅಪ್ಪಣ್ಣ ಅವರ ದರ್ಶನ ಮಾಡಿಯೇ ಒಳಬರಬೇಕಾಗಿತ್ತು. ಅಂಥ ಅಪ್ಪಣ್ಣನವರು ವಚನಗಳ ಮೂಲಕವು ಸಮಾಜ ತಿದ್ದುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಎಂದು ಬಣ್ಣಿಸಿದರು.

ಅನುದಾನ ಹೆಚ್ಚಳದ ಬಗ್ಗೆ ಭರವಸೆ:ಪ್ರಸ್ತುತ ಸರ್ಕಾರವು ಸವಿತಾ ಸಮಾಜದ ಅಭಿವೃದ್ಧಿಗಾಗಿ ನಿಗಮಗಳ ಮೂಲಕ ಸ್ವಯಂ ಉದ್ಯೋಗ ನೇರ ಸಾಲ, ಅರಿವು ಶೈಕ್ಷಣಿಕ ಸಾಲ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯ ಸಾಮಾಜಿಕ ಮುನ್ನೆಲೆಗೆ ಬರಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ನಿಗಮಗಳಿಗೆ ಈಗ ನೀಡುತ್ತಿರುವ ₹5 ಕೋಟಿ ಅನುದಾನವನ್ನು ₹50 ಕೋಟಿಗೆ ಹೆಚ್ಚಿಸುವಂತೆ ಸದನದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಯಳಂದೂರಿನ ಎಸ್‌ಡಿವಿಎಸ್ ವಿದ್ಯಾಸಂಸ್ಥೆ ಶಿಕ್ಷಕ ಗುಂಬಳ್ಳಿ ಬಸವರಾಜ್ ಮಾತಮಾಡಿ, ಹಡಪದ ಅಪ್ಪಣ್ಣನವರ ವೈಚಾರಿಕ ಪ್ರಜ್ಞೆ, ಸಮಯಪ್ರಜ್ಞೆ, ನಡವಳಿಕೆ ಉತ್ತಮವಾಗಿತ್ತು. ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಬಂಧುವಾಗಿದ್ದ ಅಪ್ಪಣ್ಣನವರು 251 ವಚನಗಳನ್ನು ರಚಿಸಿದ್ದು, ಅವರನ್ನು ಅಲ್ಲಮಪ್ರಭುಗಳು ನಿಜಸುಖಿ ಎಂದು ಕರೆದಿದ್ದಾರೆ ಎಂದರು.

ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿದರು. ವಿಜಯಪುರ ಜಿಲ್ಲೆಯ ತಂಗಡಗಿ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಎ.ಆರ್.ಕೃಷ್ಣಮೂರ್ತಿ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉದಯ್‌ಕುಮಾರ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವೆಂಕಟರಾಜು, ಎಲ್ಲಾ ತಾಲೂಕುಗಳ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿಮಂದಿರದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣ ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

Share this article