ವಿದ್ಯಾವಂತರು ವೈಜ್ಞಾನಿಕ ಚಿಂತನೆ ರೂಢಿಸಿಕೊಳ್ಳಬೇಕು: ವಿಜಯ ರಾಮೇಗೌಡ

KannadaprabhaNewsNetwork | Published : Mar 16, 2025 1:51 AM

ಸಾರಾಂಶ

ವಿದ್ಯಾರ್ಥಿಗಳು ಅಂಕಗಳಿಕೆ ಜೊತೆ ಜ್ಞಾನ ಗಳಿಕೆಗೆ ಆದ್ಯತೆ ನೀಡಬೇಕು. ದೇಶದ ಸ್ವಚ್ಛತೆ, ಆರ್ಥಿಕ ಭದ್ರತೆ ಮತ್ತು ಸುರಕ್ಷತೆ ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ. ಇಂದು ಪ್ರತಿ ಕುಟುಂಬವೂ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಮಹಿಳೆಯರು ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಮುಕ್ತ ಅವಕಾಶ ಪಡೆಯುತ್ತಿದ್ದಾರೆ. ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರವೂ ಪ್ರದಾನವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ವಿದ್ಯಾವಂತರು ಮೌಢ್ಯ, ಕಂದಾಚಾರಗಳಿಂದ ಹೊರಬಂದು ವೈಜ್ಞಾನಿಕ ಚಿಂತನೆ ರೂಢಿಸಿಕೊಂಡಾಗ ಮಾತ್ರ ನವ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಹಿರೀಕಳಲೆ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಯೋಜಿಸಿದ್ದ ವಾರ್ಷಿಕ ವಿಶೇಷ ಶ್ರಮದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ವಿದ್ಯೆ ಕಲಿತ ತಕ್ಷಣ ನಮ್ಮ ಪೂರ್ವಿಕರ ಸಂಸ್ಕಾರ, ಆಚಾರ, ಸಂಪ್ರದಾಯಗಳನ್ನು ತಿರಸ್ಕರಿಸಬಾರದು. ವಿದ್ಯೆ ಜೊತೆಗೆ ಸಂಸ್ಕಾರವಿರಬೇಕು ಎಂದರು.

ವಿದ್ಯಾರ್ಥಿಗಳು ಅಂಕಗಳಿಕೆ ಜೊತೆ ಜ್ಞಾನ ಗಳಿಕೆಗೆ ಆದ್ಯತೆ ನೀಡಬೇಕು. ದೇಶದ ಸ್ವಚ್ಛತೆ, ಆರ್ಥಿಕ ಭದ್ರತೆ ಮತ್ತು ಸುರಕ್ಷತೆ ಚೆನ್ನಾಗಿದ್ದರೆ ಮಾತ್ರ ನಾವು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಇಂದು ಪ್ರತಿ ಕುಟುಂಬವೂ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಮಹಿಳೆಯರು ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ಮುಕ್ತ ಅವಕಾಶ ಪಡೆಯುತ್ತಿದ್ದಾರೆ. ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರವೂ ಪ್ರದಾನವಾಗಿದೆ ಎಂದರು.

ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಪರಿಚಯ ಮಾಡಿಕೊಡುವ ಜೊತೆಗೆ ಶಿಸ್ತು ಮತ್ತು ಸೇವಾಗುಣ ಕಲಿಸಿಕೊಡುತ್ತದೆ. ಶಿಬಿರದಲ್ಲಿ ಕಲಿತ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮುದಾಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿ, ಸೇವಾ ಶಿಬಿರಗಳ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ತಾವು ಅರಿತುಕೊಳ್ಳಬೇಕು. ಶಿಬಿರದ ಮೂಲಕ ವಿದ್ಯಾರ್ಥಿಗಳು ಸಮುದಾಯ ಸಹಭಾಗಿತ್ವದ ಮಹತ್ವ ಅರಿತು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಿಬಿರದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಕಾನೂನಿನ ಅರಿವು, ಮಹಿಳೆ ಮತ್ತು ಆರೋಗ್ಯದ ಅರಿವು, ಆರ್ಥಿಕ ಸಭಲೀಕರಣದಲ್ಲಿ ಮಹಿಳೆಯರ ಪಾತ್ರ, ಶಿಕ್ಷಣ, ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕತ್ತರಘಟ್ಟ ವಾಸು ಮೌಢ್ಯ ಮತ್ತು ಮೂಢನಂಬಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಗಸರಹಳ್ಳಿ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಮುಖಂಡರಾದ ಮಂಡ್ಯ ಆಕ್ಸೀಸ್ ಬ್ಯಾಂಕ್ ವ್ಯವಸ್ಥಾಪಕ ಗಣೇಶ್, ರಾಮೇಗೌಡ, ರಾಮಕೃಷ್ಣೇಗೌಡ, ಶೆಟ್ಟಹಳ್ಳಿ ಕೃಷ್ಣಪ್ಪ, ಉಪನ್ಯಾಸಕರಾದ ಚಿಕ್ಕೋನಹಳ್ಳಿ ಸಿ.ಬಿ.ಚೇತನ ಕುಮಾರ್, ಶಿಬಿರಾಧಿಕಾರಿ ಎ.ಸಿ.ಚೂಡಲಿಂಗಯ್ಯ, ಸಹ ಶಿಬಿರಾಧಿಕಾರಿ ಜಿ.ಮಧು ಸೇರಿದಂತೆ ಹಲವರು ಇದ್ದರು.

Share this article