ಶೃಂಗೇರಿ: ಪಟ್ಟಣ ಪಂಚಾಯಿತಿ ಸದಸ್ಯಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಫೀಕ್ ಅಹಮದ್ ಅಕ್ರಮ ಶೆಡ್ ತೆರವು ಪ್ರಕರಣ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ಪ್ರಕರಣ ದಾಖಲು: ಈ ಕುರಿತು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ರಫೀಕ್ ಅಹಮದ್ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಶೃಂಗೇರಿ ಗ್ರಾಮದ ಸರ್ವೇ ನಂ. 215 ರಲ್ಲಿ ಅನಧಿಕೃತ ಶೆಡ್ ತೆರವು ಗೊಳಿಸಲು ತಹಸೀಲ್ದಾರ್ ಆದೇಶದ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ತಾಲೂಕು ಕಚೇರಿಗೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಶೆಡ್ ತೆರವುಗೊಳಿಸುವಾಗ ಒತ್ತುವರಿದಾರ ರಫೀಕ್ ಆದೇಶವಿದೆಯೇ ಎಂದು ಪ್ರಶ್ನಿಸಿದ್ದಾರೆ. ತಹಸೀಲ್ದಾರ್ ಆದೇಶ ಪ್ರತಿ ತೋರಿಸಿದಾಗ ಸುಮ್ಮನಾಗದೆ ತೆರವು ಮಾಡಬೇಡಿ ತೆರವು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಕೂಡಲೇ ಬಾಟಲಿಯಲ್ಲಿದ್ದ ಡೆಟಾಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಂತರ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಒತ್ತುವರಿದಾರ ನಮ್ಮ ಕರ್ತವ್ಯ ಪಾಲಿಸಲು ಬಿಡದ ಉದ್ದೇಶದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ದಾಖಲಿಸಲಾಗಿದೆ.