ಜಿಪಂ ಸಿಇಒ ಅಮಾನತ್ತಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ

KannadaprabhaNewsNetwork |  
Published : Mar 16, 2025, 01:51 AM IST
14 ಟಿವಿಕೆ 2 – ತುರುವೇಕೆರೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಂಡಿನಶಿವರ ಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿರುವ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಮೂಲಕ ಅವರಿಗೆ ಅಮಾನತಿನ ಶಿಕ್ಷೆ ಕೊಡಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿಯ ಸಿಇಒ ಜಿ.ಪ್ರಭುರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಜಿಲ್ಲೆಯಲ್ಲಿರುವ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡುವ ಮೂಲಕ ಅವರಿಗೆ ಅಮಾನತಿನ ಶಿಕ್ಷೆ ಕೊಡಿಸಲು ಮುಂದಾಗಿರುವ ಜಿಲ್ಲಾ ಪಂಚಾಯಿತಿಯ ಸಿಇಒ ಜಿ.ಪ್ರಭುರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ತಾಲೂಕು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ದಂಡಿನಶಿವರ ಕುಮಾರ್, ತಾಲೂಕಿನ ಪಿಆರ್ ಇಡಿಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ದಲಿತ ಸಮುದಾಯಕ್ಕೆ ಸೇರಿದ ನರಸಿಂಹ ಮೂರ್ತಿಯವರ ಕರ್ತವ್ಯ ನಿರ್ವಹಣೆ ಉತ್ತಮವಾಗಿಲ್ಲ ಎಂಬ ಆರೋಪ ಹೊರಿಸಿ ಅವರನ್ನು ಅಮಾನತುಗೊಳಿಸಲು ಮುಂದಾಗಿದ್ದಾರೆ. ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯನವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಗುಬ್ಬಿ ತಾಲೂಕಿನ ಹಾಗಲವಾಡಿ ಪಂಚಾಯಿತಿಯ ಪಿಡಿಒ ಶಿವಕುಮಾರ್ ನರೇಗಾ ಯೋಜನೆಯಡಿ ಹಣ ದುರುಪಯೋಗಪಡಿಸಿದ್ದಾರೆ ಎಂಬ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಅಲ್ಲದೇ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಹೇಳಿದರು.

ಪಾವಗಡ ತಾಲೂಕಿನ ಕೊಡಮಡುಗು ಗ್ರಾಪಂ ಪಿಡಿಒ ಗಂಗಮಹಾದೇವಯ್ಯ, ಕೊರಟಗೆರೆ ಕುರಂಕೋಟೆ ಪಿಡಿಒ ಸುನಿಲ್, ಕ್ಯಾಮೇನಹಳ್ಳಿ ಪಿಡಿಒ ವಿನೋದ್, ಶಿರಾ ತಾಲೂಕು ನಾದೂರು ಗ್ರಾಪಂ ಪಿಡಿಒ ಲಕ್ಷ್ಮೀಬಾಯಿಯವರನ್ನು ಅಮಾನತು ಮಾಡಲಾಗಿದೆ. ಶಿರಾ ತಾಲೂಕಿನ ಕೊಟ್ಟ ಗ್ರಾಪಂ ಪಿಡಿಒ ವೆಂಕಟೇಶ್ ಸಹಾಯಕ ನಿರ್ದೇಶಕರ ಪ್ರಭಾರ ಹುದ್ದೆಯಿಂದ ಬದಲಾಯಿಸಲಾಗಿದೆ ಎಂದು ಅವರು ಆರೋಪಿಸಿದರು.

ಎಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ದಲಿತ ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಅವರನ್ನು ವೈಯಕ್ತಿಕವಾಗಿ ನಿಂದಿಸುವುದು, ಅವಾಚ್ಯ ಶಬ್ದಗಳ ಬಳಕೆ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿಯ ನರೇಗಾ ಎಡಿಪಿಸಿ ಆಗಿರುವ ನಂಜೇಗೌಡರ ವಿರುದ್ಧ ಗುರುತರವಾದ ಆರೋಪ ಇದ್ದು ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರೂ ಸಹ ಸ್ವ- ಜಾತಿ ವ್ಯಾಮೋಹದಿಂದಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಂಡಿನಶಿವರ ಕುಮಾರ್ ದೂರಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿಕುಮಾರ್ ಗೆ ಸಿಇಒ ಕಪಾಳ ಮೋಕ್ಷ ಮಾಡಿದ್ದರು. ಸಿಇಒ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಎಸ್ ಎಸ್ ನ ಜಿಲ್ಲಾ ಸಂಚಾಲಕ ಶಿವಶಂಕರ್, ಪಟ್ಟಣ ಪಂಚಾಯಿತಿ ಸದಸ್ಯ ಚಿದಾನಂದ್, ಮುನಿಯೂರು ರಂಗಸ್ವಾಮಿ, ಆನೇಕೆರೆ ಶಿವನಂಜಪ್ಪ, ಬೋರಪ್ಪ, ಹೊನ್ನೇನಹಳ್ಳಿ ಕೃಷ್ಣ, ಗಂಗಾಧರ್, ಕುಂದೂರು ಆನಂದ್ ಕುಮಾರ್, ಮುತ್ತುಗದಹಳ್ಳಿ ಶಿವಣ್ಣ, ಅರಳಿಕೆರೆ ಶಿವಕುಮಾರ್ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ