ಶಿವಮೊಗ್ಗ: ನಗರದೆಲ್ಲೆಡೆ ಶನಿವಾರ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಯುವಕ, ಯುವತಿಯರು ಪರಸ್ಪರ ಬಣ್ಣ ಎರಚುತ್ತ ಹೋಳಿ ಸಂಭ್ರಮದಲ್ಲಿ ಮಿಂದೆದ್ದರು.
ಶಿವಮೊಗ್ಗದ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬದ ಪಯುಕ್ತ ಡಿಜೆ, ನೃತ್ಯ, ದೊಡ್ಡ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಸರಿ ಅಲಂಕಾರ ಸಮಿತಿ ವತಿಯಿಂದ ಅದ್ಧೂರಿಯಾಗಿ ರಂಗಿನ ಹಬ್ಬ ಆಚರಿಸಲು ಅವಕಾಶ ಕಲ್ಪಿಸಲಾಗಿತ್ತು. ನೃತ್ಯ, ಡಿಜೆ ಸೌಂಡ್, ಒಬ್ಬರಿಗೊಬ್ಬರು ನೀರೆರೆಚುವ ಮೂಲಕ ಸಾವಿರಾರು ಯುವಕ-ಯುವತಿಯರು ಖುಷಿಯ ಸಾಗರದಲ್ಲಿ ಕುಣಿದು ಕುಪ್ಪಳಿಸಿದರು.ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ರಕ್ಷಣಾ ವ್ಯವಸ್ಥೆಗೆ ನಿಯೋಜಿಸಲಾಗಿತ್ತು. ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಕೆಲವರು ಹಾಡುಗಳಿಗೆ ಹಜ್ಜೆ ಹಾಕಿದರು. ಕೆಲವರು ತಮ್ಮ ಮಕ್ಕಳನ್ನು ಕರೆತಂದು ಓಕುಳಿ ಆಟವಾಡಿ ಖುಷಿ ಪಟ್ಟರು. ಯುವಕರು ಹಾಡುಗಳಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿದರು.ಸೀನಪ್ಪ ಶೆಟ್ಟಿ ವೃತ್ತದಲ್ಲಿ ಹೋಳಿ ಆಚರಣೆ ಕಾರಣ ನೆಹರೂ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಹೋಳಿ ಆಚರಣೆ ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಎಂ.ಜಿ. ಪ್ಯಾಲೇಸ್ ಕಟ್ಟಡ, ಶ್ರೀನಿಧಿ ಮಳಿಗೆ ಇರುವ ಕಟ್ಟಡ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತು ಜನರು ವೀಕ್ಷಿಸಿದರು. ಮೈತುಂಬ ಬಣ್ಣ ಹಚ್ಚಿಕೊಂಡ ಜನರು, ಸೆಲ್ಫಿ, ಪೋಟೊಗಳನ್ನು ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.ಹೋಳಿ ಹಬ್ಬದ ಸಂಭ್ರಮದ ನಡುವೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕೆಎಸ್ಈ ಮನೆಯಲ್ಲಿ ಹೋಳಿ ಹಬ್ಬಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ನಿವಾಸದಲ್ಲಿ ಶನಿವಾರ ರಾಷ್ಟ್ರಭಕ್ತ ಬಳಗದ ಕಾರ್ಯಕರ್ತೆಯರು ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಜಯಲಕ್ಷ್ಮೀ ಈಶ್ವರಪ್ಪ, ಸೀತಾಲಕ್ಷ್ಮೀ ಸೇರಿದಂತೆ ರಾಷ್ಟ್ರಭಕ್ತ ಬಳಗದ ಅಭಿಮಾನಿಗಳು ಭಾಗಿಯಾಗಿದ್ದರು.