ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ: ಎನ್.ಚಲುವರಾಯಸ್ವಾಮಿ

KannadaprabhaNewsNetwork | Published : Mar 29, 2025 12:34 AM

ಸಾರಾಂಶ

ಹೆಣ್ಣುಮಕ್ಕಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ಹೆಣ್ಣು ಮಕ್ಕಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಸರ್ಕಾರ ಪ್ರಮುಖ ಉದ್ದೇಶ. ಆದ್ದರಿಂದಲೇ ಗ್ರಾಪಂ, ತಾಪಂ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸಬಲೀಕರಣ ಮಾಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಮೈದಾನದಲ್ಲಿ ಜಿಪಂ, ಮಂಡ್ಯ ತಾಪಂ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿ. ಹೆಣ್ಣು ಮಕ್ಕಳನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಸರ್ಕಾರ ಪ್ರಮುಖ ಉದ್ದೇಶ. ಆದ್ದರಿಂದಲೇ ಗ್ರಾಪಂ, ತಾಪಂ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದೆ ಎಂದರು.

ಸ್ಥಳೀಯ ಮಟ್ಟದ ರಾಜಕೀಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಪಾಲ್ಗೊಂಡು ಯಶಸ್ವಿಯಾಗಿ ಉನ್ನತ ಮಟ್ಟದ ರಾಜಕೀಯಕ್ಕೆ ಪ್ರವೇಶ ಪಡೆಯಬೇಕು. ಮಹಿಳೆಯರು ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಬದುಕುಬೇಕು ಎಂದರು.

ರಾಜ್ಯದಲ್ಲಿ ಪ್ರತಿನಿತ್ಯ 90 ಲಕ್ಷಣದಿಂದ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಸದರಿ ವರ್ಷಕ್ಕೆ 1500 ಕೋಟಿ ರು. ಹಾಲು ಉತ್ಪಾದಕರ ಸಹಾಯಧನಕ್ಕೆ ಮೀಸಲಿಟ್ಟಿದೇವೆ. ಹಾಲಿನ ದರದ ಮೇಲೆ ಹೆಚ್ಚಿನ 4 ರು. ಯಾವುದೇ ಯೂನಿಯನ್ ಅಥವಾ ಸರ್ಕಾರ ಇಟ್ಟುಕೊಳ್ಳುವುದಿಲ್ಲ. 4 ರು. ಹಾಲು ಉತ್ಪಾದಕರಿಗೆ ನೀಡಬೇಕು ಎಂದು ಕ್ಯಾಬಿನೆಟ್‌ನಲ್ಲಿ ನಿರ್ಧರಿಸಲಾಗಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ 4 ರು. ಹೆಚ್ಚಾದರು ಸಹ ನಮ್ಮ ರಾಜ್ಯದಲ್ಲೇ ಕಡಿಮೆ ದರದಲ್ಲಿ ಹಾಲು ದೊರೆಯುತ್ತಿರುವುದು ಎಂದು ತಿಳಿಸಿದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಯಾವುದೇ ಕಾಲೇಜಿನ ಫಲಿತಾಂಶ ನೋಡಿದರೂ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಾರೆ. ಅಂತೆಯೇ ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ನಂತಹ ಉದ್ಯೋಗವನ್ನು ಅಲಂಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲೂ ಸಿಂಹಪಾಲು ಮಹಿಳೆಯರದ್ದೆ ಆಗಿರುತ್ತದೆ ಎಂದರು.

ನಂತರ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಮಹಿಳೆಯರು ಮೇಲೆ ನಡೆಯುವ ದೌರ್ಜನ್ಯ ತಡೆಯಲು, ಮಹಿಳೆಯರ ಹಕ್ಕು ಮತ್ತು ಜಾಗೃತಿ ಮೂಡಿಸುವ ಸಲುವಾಗಿ 1975 ರಲ್ಲಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆ ನಡೆಸಲು ನಿರ್ಧರಿಸಿತು. ಅದೇ ರೀತಿ ನಮ್ಮ ಸರ್ಕಾರವು ಸಹ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕೆಂದು ಸಂವಿಧಾನದ 73 ನೇ ವಿಧಿಯನ್ನು ತಿದ್ದುಪಡಿ ಮಾಡಿ ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿಯನ್ನು ಮಹಿಳೆಯರಿಗೆ ನೀಡಿತು ಎಂದರು.

ಪ್ರಸ್ತುತ ಜಿಲ್ಲೆಯ ಗ್ರಾಮ ಸಭೆಗಳಲ್ಲಿ 4000 ಗ್ರಾಪಂ ಸದಸ್ಯರು ಇದ್ದರೇ ಅದರಲ್ಲಿ 2016 ಜನ ಮಹಿಳಾ ಸದಸ್ಯರಿದ್ದಾರೆ. ಅದರಲ್ಲಿ 136 ಜನ ಗ್ರಾಪಂ ಮಹಿಳಾ ಅಧ್ಯಕ್ಷರು ಹಾಗೂ 139 ಜನ ಮಹಿಳಾ ಉಪಾಧ್ಯಕ್ಷರು ಇದ್ದಾರೆ. ಮುಂದಿನ ರಾಜಕಾರಣದಲ್ಲಿ ಶೇ.33 ರಷ್ಟು ಮೀಸಲಾತಿ ನೀಡಲು ಸಂಸತ್ತು ಒಪ್ಪಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ಅಭಿಯಾನದ ನಿರ್ದೇಶಕಿ ಪಿ.ಐ.ವಿದ್ಯಾ, ಜಿಪಂ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಕೆ.ಆರ್.ನಂದಿನಿ, ಪುರಸಭೆ ಅಧ್ಯಕ್ಷೆ ಕೋಕಿಲಾ ಅರುಣ್, ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ, ಪ್ರಸುತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ.ಮನೋಹರ್, ತಾಪಂ ಇಒ ರಾಮಲಿಂಗಯ್ಯ, ಸಹಾಯಕ ನಿರ್ದೇಶಕ ಮಂಜುನಾಥ್, ಸಂಜೀವಿನಿ ತಾಲೂಕು ಒಕ್ಕೂಟದ ಅಧ್ಯಕ್ಷೆ ಪದ್ಮ ಶ್ರೀನಿವಾಸ್, ಅನಿತಾ ಲಕ್ಷ್ಮಿ ಇದ್ದರು.

Share this article