- ಶೃಂಗೇರಿ ಕ್ಷೇತ್ರಮಟ್ಟದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆಯಲ್ಲಿ ಎನ್.ವೆಂಕಟೇಶ್‌ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ದಲಿತರು, ಶೋಷಿತರು ವಿದ್ಯಾವಂತರಾಗಬೇಕು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದಾಗ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಶೃಂಗೇರಿ ಕ್ಷೇತ್ರಮಟ್ಟದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಅಸ್ಪೃಶ್ಯತೆ, ಜಾತಿ ಪದ್ಧತಿ ಇನ್ನು ಜೀವಂತವಾಗಿವೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳು ಅಸ್ಪೃಶ್ಯತೆ ನಿವಾರಣಗೆ ಸೂಕ್ತ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ, ಅಸಮಾನತೆ, ಜಾತಿ ತಾರತಮ್ಯಗಳನ್ನು ಹಾಗೂ ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಜಿಲ್ಲಾಮಟ್ಟದಲ್ಲಿ ಪ್ರತಿಭಟನೆ, ಧರಣಿ ಸತ್ಯಾಗ್ರಹಗಳಂತ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಸಂಘಟಿತ ಹೋರಾಟದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ದಲಿತ ಮಹಿಳಾ ಒಕ್ಕೂಟ ರಾಜ್ಯ ಸಂಘಟನಾ ಸಂಚಾಲಕಿ ಎಂ.ವಿ. ಭವಾನಿ ಮಾತನಾಡಿ, ಮೇಲ್ವರ್ಗದವರ ಮೇಲೆ ದ್ವೇಷ, ಅಸೂಯೆ ಬೇಡ. ದಾಸ್ಯದಿಂದ ಹೊರಗೆ ಬಂದು ಸಂಘಟಿತರಾಗಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ಅವುಗಳನ್ನು ಪಡೆದುಕೊಳ್ಳಬೇಕು. ಎಲ್ಲರೂ ಕೂಡ ಅರಿವಿನ ಬೆಳಕಿನಲ್ಲಿ ಮುನ್ನಡೆಯಬೇಕು ಎಂದರು.
ಗ್ರಾಮ ಸಂಚಾಲಕ ಚರಣ್ ಮಾತನಾಡಿ, ಹಳ್ಳಿಗಳಲ್ಲಿ ದಲಿತರಿಗೆ ಮೇಲ್ಜಾತಿಯವರು ಮನೆ ಮುಂದೆ ಪ್ರತ್ಯೇಕ ತಟ್ಟೆ, ಲೋಟ ಇಟ್ಟಿದ್ದಾರೆ. ಈ ಕುರಿತು ನಾವು ಬದಲಾಗಬೇಕು. ನಮ್ಮ ಮಕ್ಕಳು ಇಂತ ಘೋರ ದೃಶ್ಯಗಳನ್ನು ನೋಡಬಾರದು. ಬದಲಾವಣೆಗಾಗಿ ಒಗ್ಗಟ್ಟಾಗಿರಬೇಕು ಎಂದು ಹೇಳಿದರು.ಸಂಘಟನಾ ಸಂಚಾಲಕ ಸುನೀಲ್, ಪ್ರಜಿತ್, ಗ್ರಾಮ ಸಂಚಾಲಕಿ ಸವಿತಾ, ಜಾನಕಿ, ಜಿಲ್ಲಾ ಸಂಘಟನಾ ಸಂಚಾಲಕ ಮಾಗುಂಡಿ ಸುಬ್ರಮಣ್ಯ ಮತ್ತಿತರರು ಹಾಜರಿದ್ದರು.