ಶಿಕ್ಷಣದಿಂದ ಅಸಮಾನತೆ ಹೋಗಲಾಡಿಸಲು ಸಾಧ್ಯ

KannadaprabhaNewsNetwork | Published : Apr 29, 2025 12:48 AM

ಸಾರಾಂಶ

ಶಿಕಾರಿಪುರ: ಶಿಕ್ಷಣದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ. ದೇವಾಲಯದ ಗಂಟೆಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಮೊಳಗಬೇಕು ಎಂಬುದು ಡಾ.ಅಂಬೇಡ್ಕರ್ ರವರ ಬಹು ದೊಡ್ಡ ಕನಸಾಗಿತ್ತು. ಈ ದಿಸೆಯಲ್ಲಿ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಶಿಕಾರಿಪುರ: ಶಿಕ್ಷಣದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ. ದೇವಾಲಯದ ಗಂಟೆಗಳಿಗಿಂತ ಶಾಲೆಗಳ ಗಂಟೆ ಹೆಚ್ಚು ಮೊಳಗಬೇಕು ಎಂಬುದು ಡಾ.ಅಂಬೇಡ್ಕರ್ ರವರ ಬಹು ದೊಡ್ಡ ಕನಸಾಗಿತ್ತು. ಈ ದಿಸೆಯಲ್ಲಿ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರಕಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸೋಮವಾರ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆದಿ ಜಾಂಬವ (ಮಾದಿಗ) ಸಮಾಜದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ರವರ ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ನಂತರದಲ್ಲಿ ಸಂವಿಧಾನ ಪೀಠಿಕೆಯನ್ನು ಪ್ರತಿ ಶಾಲೆಯಲ್ಲಿಯೂ ಓದಬೇಕು ಎಂದು ಆದೇಶಿಸಿದ್ದು, ಇದರಿಂದಾಗಿ ಮಕ್ಕಳಲ್ಲಿ ಹೃದಯ ವೈಶಾಲ್ಯತೆ ಉಂಟಾಗಿ ಪ್ರತಿ ಮಗು ಸೋದರ ಭ್ರಾತೃತ್ವವನ್ನು ಹೊಂದಲು ಸಾಧ್ಯವಾಗುತ್ತದೆ ಎಂದರು.

ದೇವಾಲಯದ ಗಂಟೆಗಳಿಗಿಂತ ಶಾಲೆಯ ಗಂಟೆ ಹೆಚ್ಚು ಮೊಳಗಬೇಕು ಎಂಬುದು ಅಂಬೇಡ್ಕರ್ ರವರ ಆಶಯವಾಗಿದ್ದು, ಈ ದಿಸೆಯಲ್ಲಿ ಸರ್ಕಾರ ಹೆಚ್ಚು ಸಕ್ರೀಯವಾಗಿದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 1.8 ಕೋಟಿ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದು, ಶಿಕ್ಷಣದಿಂದ ಮಾತ್ರ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂದು ಹೇಳಿದರು.ನಾವು ಮೇಲು-ಕೀಳು ನನ್ನ ಜಾತಿ, ಎಂದು ಹೊಡೆದಾಡುವ ಮೊದಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡಾಗ ಎಲ್ಲ ಸಮುದಾಯ ಏಳ್ಗೆ ಹೊಂದಲು ಸಾಧ್ಯ ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮೇ 5 ರಿಂದ 23ರ ವರೆಗೆ ಒಳ ಮೀಸಲಾತಿಯನ್ನು ನೀಡುವ ಉದ್ದೇಶದಿಂದ ಜಾತಿ ಗಣತಿಯನ್ನು ಆರಂಭಿಸಿದ್ದು, ಈ ಅವಧಿಯಲ್ಲಿ ಸಮಾಜ ಬಾಂಧವರು ಹಬ್ಬ ಜಾತ್ರೆ, ಜಯಂತಿಗಳನ್ನು ಆಚರಿಸದೆ ಪ್ರತಿಯೊಬ್ಬರೂ ಜಾತಿಯ ಹೆಸರನ್ನು ಕಡ್ಡಾಯವಾಗಿ ಬರೆಸಬೇಕು ಎಂದು ಕೋರಿದರು.

ತಪ್ಪಿದಲ್ಲಿ ಜೀವನದಲ್ಲಿ ಮುಂದೆಂದೂ ನಾವು ಒಳಮೀಸಲಾತಿಯ ಸೌಲಭ್ಯ ಪಡೆಯಲು, ಅನುಭವಿಸಲು ಸಾಧ್ಯವಾಗುವುದಿಲ್ಲ, ಅದಕ್ಕಾಗಿ ಸಂಘಟಿತರಾಗಿ ಪ್ರಯತ್ನಿಸಿ, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತಪ್ಪ ಮಾತನಾಡಿ, ಕೇವಲ ಅಟ್ರಾಸಿಟಿ, ಹೋರಾಟಗಳಿಗೆ ಮಾತ್ರ ನಮ್ಮನ್ನು ಸೀಮಿತಗೊಳಿಸಿ ಉಳಿದವರು ಅಧಿಕಾರವನ್ನು ಹಿಡಿಯುತ್ತಿದ್ದಾರೆ. ಇದು ನಮಗೆ ಅರ್ಥವಾಗದೆ ಇರುವ ಕಾರಣ ನಮ್ಮಲ್ಲಿ ಜಿ.ಪಂ, ತಾ.ಪಂ ಸದಸ್ಯರಾಗಲು ಸಾಧ್ಯವಾಗುತ್ತಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಆದಿ ಜಾಂಬವ ಸಮಾಜದ ಗೌರವಾಧ್ಯಕ್ಷ ಕೆ.ಹೊಳೆಯಪ್ಪ ಗಾಮ ವಹಿಸಿದ್ದರು.ಪ್ರಾಸ್ತಾವಿಕವಾಗಿ ತಾ.ಆದಿ ಜಾಂಬವ ಸಮಾಜದ ಅಧ್ಯಕ್ಷ ಎನ್.ನಿಂಗಪ್ಪ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ, ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್, ಶ್ರೀನಿವಾಸ್ ಕರಿಯಣ್ಣ, ಗವಿಸಿದ್ದಣ್ಣ ದ್ಯಾಮಣ್ಣನವರ್, ಪುಷ್ಪ ಶಿವಕುಮಾರ್, ಮಂಜುನಾಥ್ ದೊಡ್ಮನಿ, ರಾಮಪ್ಪ.ಜೆ.ಇ, ಡಾ.ಮಹದೇವಪ್ಪ ದಳಪತಿ, ನಿಂಗಪ್ಪ ಕಲ್ಮನೆ, ಬಸವರಾಜ್ ಮಾರವಳ್ಳಿ, ಪಿ ಬಸವರಾಜ್, ಜಗದೀಶ್ ಚುರ್ಚುಗುಂಡಿ, ಸುರೇಶ್ ಅರಳೀಹಳ್ಳಿ, ಭಂಡಾರಿ ಮಾಲತೇಶ್, ಉಳ್ಳಿ ದರ್ಶನ್, ಶಿವುನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Share this article