ಉಡುಪಿ: ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಇದರ ರಾಜ್ಯ ಮಟ್ಟದ ಶೈಕ್ಷಣಿಕ ಜಾಥಾ ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದು, ಮಂಗಳವಾರ ಮಧ್ಯಾಹ್ನ ಉಡುಪಿಗೆ ಆಗಮಿಸಿತು. ಉಡುಪಿ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜಾಥಾವನ್ನು ಸ್ವಾಗತಿಸಿ ನಂತರ ಸಭೆ ನಡೆಸಲಾಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ. ಕೆ. ಪಣಿರಾಜ್, ನಮಗೆ ಸ್ವಾತಂತ್ರ್ಯ ಸಿಕ್ಕಿದಾಗ ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು, ಈ ಮೂಲಕ ಅಸಮಾನತೆ ತೊಲಗಿಸಬೇಕು ಎಂದ ಆಶಯವಿತ್ತು. ಆದರೆ ಇಂದಿಗೂ ಸಾರ್ವಜನಿಕ ಶಿಕ್ಷಣಕ್ಕಾಗಿ ಹೋರಾಟ ನಡೆಸಬೇಕಾಗ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.
ಸಾರ್ವಜನಿಕ ಶಿಕ್ಷಣದ ಆಶಯ ಈಡೇರಬೇಕಾದರೆ ಶಿಕ್ಷಣ ವ್ಯವಸ್ಥೆಯ ನಿಯಂತ್ರಣ ಸಂಪೂರ್ಣವಾಗಿ ಸರ್ಕಾರದ ಕೈಯಲ್ಲಿರಬೇಕು, ಖಾಸಗಿಯವರ ಕೈಗೆ ನೀಡಿದರೆ ಬಡವರಿಗೆ ಶಿಕ್ಷಣ ಸಿಗುವುದಿಲ್ಲ. ಆದ್ದರಿಂದ ಸಾರ್ವಜನಿಕ ಶಿಕ್ಷಣವನ್ನು ತುರ್ತಾಗಿ ಉಳಿಸಬೇಕಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ ಮತ್ತು ಹಾಸ್ಟೇಲ್‌ಗಳ ಬಲವರ್ಧನೆಗಾಗಿ ನಡೆಯುತ್ತಿರುವ ಜಾಥಾವನ್ನು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್ ಸ್ವಾಗತಿಸಿ ಮಾತನಾಡಿದರು. ಜಾಥಾ ತಂಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ವಿಜಯ, ರಾಜ್ಯ ಸಮಿತಿ ಸದಸ್ಯರಾದ ಅರ್ಪಿತ, ಮಣಿಭಾರತಿ, ವನಿತಾ ಮುಂತಾದರಿದ್ದರು. ಎಶ್‌ಎಫ್‌ಐನ ಉಡುಪಿ ತಾಲೂಕು ಕಾರ್ಯದರ್ಶಿ ಕಾರ್ತಿಕ್ , ಡಿವೈಎಫ್‌ಐ ಮಾಜಿ ಮುಖಂಡರಾದ ಸುರೇಶ್ ಕಲ್ಲಾಗಾರ, ಕಾರ್ಮಿಕ ಮುಖಂಡರಾದ ಉಮೇಶ್ ಕುಂದರ್, ಶಧಿಧರ ಗೊಲ್ಲ, ನಳಿನಿ ಎಸ್., ರಂಗನಾಥ, ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷೆ ಸರೋಜ ಎಸ್. ಉಪಸ್ಥಿತರಿದ್ದರು.
ಎಸ್‌ಎಫ್‌ಐನ ಮಾಜಿ ಕಾರ್ಯದರ್ಶಿ ಕವಿರಾಜ್ ಎಸ್, ಕಾಂಚನ್ ಸ್ವಾಗತಿಸಿ, ನಿರೂಪಿಸಿದರು. ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯೆ, ಉಡುಪಿ ಜಿಲ್ಲಾ ನಾಯಕಿ ಕೃತಿಕಾ ವಂದಿಸಿದರು.