ಕೊಟ್ಟೂರು: ಶ್ರೀರಾಮಚಂದ್ರನನ್ನು ದೇವರು ಎಂದು ಪೂಜಿಸಿ ದೇವಾಲಯವನ್ನು ಕಟ್ಟಿದ ಸಮಾಜ ರಾಮಾಯಣದ ಬೃಹತ್ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ದೇವರೆಂದು ಒಪ್ಪಿಕೊಳ್ಳಲು ಮುಂದಾಗದಿರುವುದು ದೊಡ್ಡ ದುರಂತ ಎಂದು ಬಳ್ಳಾರಿ ವಿಎಸ್ ಕೆಎ ಅಸಿಸ್ಟೆಂಟ್ ರಿಜಿಸ್ಟರ್ ಡಾ.ಗೋಪಾಲ ಎನ್. ಖೇದ ವ್ಯಕ್ತಪಡಿಸಿದರು.ಪಟ್ಟಣದ ಚಿರಿಬಿ ರಸ್ತೆಯ ಗದ್ದುಗೆಮಠದ ಆವರಣದಲ್ಲಿ ವಾಲ್ಮೀಕಿ ನವ ಯುವಕ ಸಮಾಜದ ಸೇವ ಸಂಘ ಮಂಗಳವಾರ ಆಯೋಜಿಸಿದ್ದ ಕೊಟ್ಟೂರು ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀ, ನೀತಿ ನಿಲುವುಗಳ ಕಾರಣಕ್ಕಾಗಿ ಜಾತಿ ಶ್ರೇಷ್ಠವಾಗಿರಬೇಕು. ಜಾತಿ ಹೆಸರಿನಲ್ಲಿ ಅಸಮಾನತೆ ಮತ್ತು ಮೌಢ್ಯತೆ ಬೆಳೆಸಿಕೊಳ್ಳಲು ಬಳಸಿಕೊಳ್ಳಬಾರದು ಎಂದರು.
ಮನುಷ್ಯ ಸಂಬಂಧಗಳು ಇತ್ತೀಚೆಗೆ ಕೇವಲ ಕಾರಣಕ್ಕಾಗಿ ದೂರಾಗುತ್ತಿವೆ. ಪ್ರತಿ ಸಂಬಂಧಗಳು ಸಡಿಲವಾಗದೇ ಗಟ್ಟಿಯಾಗಿರಬೇಕು. ಲೋಕ ಕಲ್ಯಾಣಾರ್ಥ ಮತ್ತು ಸರ್ವರಲ್ಲಿ ಮಾನವೀಯ ಉತ್ತಮ ಗುಣಗಳು ಮೈಗೂಡಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಬೃಹತ್ ಗ್ರಂಥ ಬರೆದರು ಎಂದರು.ವಾಲ್ಮೀಕಿ ಜನಾಂಗದ ಯುವಕರು ಕುಡಿತದಿಂದ ದೂರ ಸರಿದು ರಚನಾತ್ಮಕ ಸಮಾಜಮುಖಿ ಕಾರ್ಯದತ್ತ ಸದಾ ತೊಡಗಿಸಿಕೊಳ್ಳಬೇಕು ಎಂದರು.
ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಯೋಗಿರಾಜೇಂದ್ರ ಶಿವಾಚಾರ್ಯರು, ಬಿಎಸ್ ಎಸ್ ಮುಖಂಡ ಬಿ.ಮರಿಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ವಾಲ್ಮೀಕಿ ಸಮಾಜದ ಸೂರ್ಯ ಪಾಪಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ವಿ.ಕೆಂಚಮ್ಮ, ರಾಜೋತ್ಸವ ಪ್ರಶಸ್ತಿ ವಿಜೀತ ಉಚ್ಚೆಂಗಪ್ಪ, ಡಾ.ಎಚ್.ಕೊಟ್ರೇಶ್, ಕನ್ನಾಕಟ್ಟಿ ಕೆಂಚಪ್ಪ ಅವರನ್ನು ಸನ್ಮಾನಿಸಲಾಯಿತು.