ಕುಷ್ಟಗಿ: ಶಿಕ್ಷಣ ಜೀವನದ ಬೆಳಕು, ವಿದ್ಯಾರ್ಥಿನಿಯರು ಉನ್ನತ ಗುರಿ ಸಾಧಿಸುವ ಮೂಲಕ ಸಮಾಜದಲ್ಲಿ ಮಾದರಿಯಾಗಬೇಕು ಎಂದು ಕಾಂಗ್ರೆಸ್ ಯುವಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮಾಂತರ ಭಾಗದಲ್ಲಿ ಶಿಕ್ಷಣ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಶಿಕ್ಷಣದಿಂದ ಉಜ್ವಲ ಭವಿಷ್ಯ ನಿರ್ಮಾಣವಾಗಲಿದ್ದು, ಶಿಕ್ಷಣವನ್ನು ಕೇವಲ ಅಂಕಗಳಿಗೆ ಸೀಮಿತಗೊಳಿಸದೆ ವ್ಯಕ್ತಿತ್ವ ಅಭಿವೃದ್ಧಿಗೆ ಬಳಸಿಕೊಳ್ಳಬೇಕು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ಸದುಪಯೋಗಪಡಿಸಿಕೊಂಡರೆ ಉನ್ನತ ಹುದ್ದೆ ಅಲಂಕರಿಸಬಹುದು ಎಂದು ಹೇಳಿದರು.ಲಾಡ್ಲೆಮಷಾಕ್ ದೋಟಿಹಾಳ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಪೋಷಕರು ಹಾಗೂ ಶಿಕ್ಷಕರ ಪರಿಶ್ರಮದ ಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ: ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ವೈಷ್ಣವಿ ಹನಮಂತರಾವ ದೇಸಾಯಿ ಎಂಬ ವಿದ್ಯಾರ್ಥಿನಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ 598 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ರ್ಯಾಂಕಿನಲ್ಲಿ ಸಾಧನೆ ಹಾಗೂ ದೋಟಿಹಾಳ ಗ್ರಾಮದ ಗೌಂಡಿ ಕೆಲಸ ಮಾಡುವನ ಮಗಳು ಸನಾ ಮಹ್ಮದರಫೀಕ್ ಇಟಗಿ ಎಂಬ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಲಿಯಲ್ಲಿ 592 ಅಂಕ ಗಳಿಸಿ ದೋಟಿಹಾಳ ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಸ್ಥಾನದಲ್ಲಿ ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ವಿದ್ಯಾರ್ಥಿನಿಯರ ಮನೆಗೆ ಭೇಟಿ ಸನ್ಮಾನಿಸಿ ಗೌರವಿಸಿದರು.