ಕುಮಟಾ: ಮಳೆ ಹನಿಯೊಂದು ನೆಲದಾಳಕ್ಕಿಳಿದು ಬೇರಿನ ಮೂಲಕ ಮರದ ಹಸಿರಿನ ನಡುವೆ ಸಮಾಜಕ್ಕಾಗಿ ಫಲವಾಗುವಂತೆ ವಿದ್ಯಾರ್ಥಿಗಳು ಶಿಕ್ಷಕರಿಂದ ಪಡೆದ ವಿದ್ಯೆ, ಶಾಲೆಯಿಂದ ಪಡೆದ ಸಂಸ್ಕಾರದಿಂದ ಸಮಾಜಕ್ಕೆ ನೆರಳಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ನುಡಿದರು.
ಮಕ್ಕಳಲ್ಲಿ ದೇಹದ ಜತೆಗೆ ಬುದ್ಧಿಯ ಬೆಳವಣಿಗೆಯನ್ನು ಮಾಡುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಾಲೆಯು ವಿದ್ಯೆಯೊಟ್ಟಿಗೆ ಸಂಸ್ಕಾರವನ್ನೂ ನೀಡುತ್ತದೆ. ಜ್ಞಾನದ ಸಂಕ್ರಾಂತಿಯಾಗುತ್ತದೆ. ಪ್ರಗತಿ ವಿದ್ಯಾಲಯದಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳದೊಂದಿಗೆ ಜ್ಞಾನ ಹರಿವೂ ಹೆಚ್ಚಿದೆ. ಇದರಿಂದಾಗಿ ಸಾಧನೆಗಳು ವಿಸ್ತರಿಸುತ್ತಿರುವುದು ಸಂತಸದ ವಿಷಯ ಎಂದರು.
ಮುಖ್ಯ ಅತಿಥಿ ಜಾಸ್ಮಿನ್ ಅಪೆರಲ್ಸ್‌ನ ಎಂ.ಡಿ. ವಿದ್ಯಾಧರ ಹೆಗಡೆ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಜವಾಬ್ದಾರಿ. ಹಾಗೇ ಯುವಕರಿಗೆ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸಬೇಕು. ಪ್ರಗತಿ ವಿದ್ಯಾಲಯವು ಶಿಕ್ಷಣದ ಜತೆ ಉತ್ತಮ ಸಂಸ್ಕಾರ, ಉದ್ಯೋಗದ ಭರವಸೆ ನೀಡಿದೆ ಎಂದರು.ಇನ್ನೋರ್ವ ಮುಖ್ಯ ಅತಿಥಿ ಐಟಿಐಎಲ್ ಕಂಪನಿಯ ಎಂಡಿ ಪ್ರಸನ್ನ ಹೆಗಡೆ ಹುಣಸೆಮಕ್ಕಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯನ್ನು ವಿದ್ಯಾರ್ಥಿಗಳು ಸವಾಲಾಗಿ ಸ್ವೀಕರಿಸಬೇಕಾಗಿದೆ. ಹಾಗೆಯೇ ಮೂರೂರು-ಕಲ್ಲಬ್ಬೆ ಭಾಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಗಮನಾರ್ಹ ಬೆಳವಣಿಗೆ ಸಂತಸ ನೀಡಿದೆ ಎಂದರು. ನಿವೃತ್ತ ಪ್ರಾಚಾರ್ಯ ಕಡತೋಕಾ ಎಸ್ . ಶಂಭು ಭಟ್ಟ ಇದ್ದರು.
ವಿದ್ಯಾನಿಕೇತನ ಸಂಸ್ಥೆಯ ಸದಸ್ಯರು, ಊರ ನಾಗರಿಕರು, ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಕಾರ್ಯಧ್ಯಕ್ಷ ಆರ್. ಜಿ. ಭಟ್ ಕಲ್ಲರೆಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಎಸ್.ಹೆಗಡೆ ವಂದಿಸಿದರು. ಶಿಕ್ಷಕ ರಾಘವೇಂದ್ರ ಭಟ್, ಲೋಕೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.