ಶಿಕ್ಷಣ, ಅನ್ನ, ಆರೋಗ್ಯ ನಮ್ಮ ಸರ್ಕಾರದ ಆದ್ಯತೆ: ಸಿಎಂ

KannadaprabhaNewsNetwork |  
Published : Jun 04, 2025, 02:19 AM IST
ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ‌ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ

ಗದಗ: ಶಿಕ್ಷಣ, ಅನ್ನ, ಆರೋಗ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ತಿಳಿಸಿರುವ ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮಂತ್ರ ಎಲ್ಲರೂ ಪಾಲಿಸಬೇಕು. ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ ಎಂದು‌‌ ಸಿಎಂ ಬೇಸರ ವ್ಯಕ್ತ ಪಡಿಸಿದರು.

ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ‌ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕವಾಗಿ ಶೂದ್ರ ವರ್ಗದ ಜನ‌ ಹಿಂದುಳಿಯಲು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ. ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ‌ ಅಸಮಾನತೆ ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ‌ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು.

ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಎನ್ನುವ ಶಿಕ್ಷಕರು ಸಿಗದೇ ಹೋಗಿದ್ದರೆ ಶಿಕ್ಷಣವೂ ಸಿಗುತ್ತಿರಲಿಲ್ಲ, ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಹಸು ಕಾಯ್ಕೊಂಡು ಇರಬೇಕಾಗಿತ್ತು. ಅದಕ್ಕೇ ನಮ್ಮ ಸರ್ಕಾರ ಶಿಕ್ಷಣ-ಆರೋಗ್ಯ-ಅನ್ನಕ್ಕೆ ಪ್ರಮುಖ ಆದ್ಯತೆ ನೀಡುತ್ತಿದೆ. ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿಯವರ ಆಶಯಗಳು ಈಡೇರಬೇಕಾದರೆ ಸರ್ವರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು ಎಂದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್, ಸರ್ಕಾರಿ ಮುಖ್ಯಸಚೇತಕ ಹಾಗೂ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್, ಶಾಸಕರಾದ ಬಸವರಾಜ ಶಿವಣ್ಣನವರ, ಜಿ.ಎಸ್.ಪಾಟೀಲ, ಸಿ.ಸಿ. ಪಾಟೀಲ್, ಎನ್.ಎಚ್. ಕೋನರೆಡ್ಡಿ, ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಫಕ್ಕೀರಪ್ಪ ಹೆಬಸೂರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ವೈ.ಎನ್. ಗೌಡರ, ರಾಮಕೃಷ್ಣ ದೊಡ್ಡಮನಿ, ಬಿ.ಆರ್. ಯಾವಗಲ್ಲ, ಅಜ್ಮಂಪೀರ ಖಾದ್ರಿ, ರವಿ ದಂಡಿನ, ಪ್ರಕಾಶ ಕರಿ, ಶ್ರೀಧರ ಕುರಡಗಿ, ರುದ್ರಣ್ಣ ಗುಳಗುಳಿ, ವೀರೇಂದ್ರ ಪಾಟೀಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಗದಗ ನಗರದಲ್ಲಿ ನೂರು ವರ್ಷಗಳ ಹಿಂದೆಯೇ ಕುರುಬ ಸಮಾಜ ಸಂಘಟಿಸಿ ಸಹಕಾರ ಸಂಘ ಸ್ಥಾಪಿಸಿದ್ದು, ಅತ್ಯಂತ ಮುಂದಾಲೋಚನೆಯ ಸಾಮಾಜಿಕ ನ್ಯಾಯದ ಕಾರ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!