ವಿದ್ಯೆ, ದುಡಿಮೆ, ತಾಳ್ಮೆ ಬದುಕಿನ ಶ್ರೇಯಸ್ಸಿಗೆ ಮೆಟ್ಟಿಲು

KannadaprabhaNewsNetwork |  
Published : Jun 03, 2024, 12:30 AM IST
೦೧ಬಿಹೆಚ್‌ಆರ್ ೧: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಗುರುಕುಲದ 32ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಜೂನ್ ತಿಂಗಳ ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಬಾಳೆಹೊನ್ನೂರು, ಮೌಲ್ಯಾಧಾರಿತ ಬದುಕಿಗೆ ಶಿಕ್ಷಣ ಅಗತ್ಯ. ಸಂಸ್ಕಾರಯುಕ್ತ ಶಿಕ್ಷಣದಿಂದ ಜೀವನ ಉಜ್ವಲ. ವಿದ್ಯೆ ದುಡಿಮೆ ಮತ್ತು ತಾಳ್ಮೆ ಬದುಕಿನ ಯಶಸ್ಸಿಗೆ ಮೆಟ್ಟಿಲು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ರೇಣುಕಾಚಾರ್ಯ ಗುರುಕುಲದ ವಾರ್ಷಿಕೋತ್ಸವದಲ್ಲಿ ಶ್ರೀ ರಂಭಾಪುರಿ ಜಗದ್ಗುರು

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಮೌಲ್ಯಾಧಾರಿತ ಬದುಕಿಗೆ ಶಿಕ್ಷಣ ಅಗತ್ಯ. ಸಂಸ್ಕಾರಯುಕ್ತ ಶಿಕ್ಷಣದಿಂದ ಜೀವನ ಉಜ್ವಲ. ವಿದ್ಯೆ ದುಡಿಮೆ ಮತ್ತು ತಾಳ್ಮೆ ಬದುಕಿನ ಯಶಸ್ಸಿಗೆ ಮೆಟ್ಟಿಲು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಶನಿವಾರ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ 32ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಣ್ಣು ಚೆನ್ನಾಗಿದ್ದರೆ ಜಗ ಚೆನ್ನಾಗಿ ಕಾಣುತ್ತದೆ. ನಾಲಿಗೆ ಚೆನ್ನಾಗಿದ್ದರೆ ಜನರಿಗೆ ಒಳ್ಳೆಯವರಾಗಿ ಕಾಣುತ್ತೇವೆ. ಕಷ್ಟ ಕಲಿಸುತ್ತದೆ. ಸುಖ ಮರೆಸುತ್ತದೆ. ಆದರೆ ಒಳ್ಳೆಯತನ ಮತ್ತು ಆತ್ಮವಿಶ್ವಾಸ ಮಾತ್ರ ಬಾನೆತ್ತರಕ್ಕೆ ಬೆಳೆಯಲು ಸಹಕರಿಸುತ್ತದೆ. ಕಷ್ಟ ಯಾವಾಗಲೂ ಸಾಗರದಷ್ಟು ಇದ್ದರೆ ಸುಖ ಸಾಸಿವೆಯಷ್ಟೇ ಸಿಗುವುದು.

ಮನುಷ್ಯ ಮನಸ್ಸಿನಿಂದ ದೊಡ್ಡವನಾಗಬೇಕೆ ಹೊರತು ಬಟ್ಟೆ ಮತ್ತು ಸಿರಿ ಸಂಪತ್ತಿನಿಂದಲ್ಲ. ಎತ್ತರಕ್ಕೆ ಏರಬೇಕಾದರೆ ಮೆಟ್ಟಲು ತುಳಿಯಬೇಕೆ ವಿನಃ ಇನ್ನೊಬ್ಬರನ್ನು ತುಳಿಯಬಾರದು. ಜಗದ್ಗುರು ರೇಣುಕಾಚಾರ್ಯ ಗುರುಕುಲ ಪ್ರಾರಂಭ ಗೊಂಡು 32 ವರ್ಷಗಳಾಗಿವೆ. ಈ ಅವಧಿಯಲ್ಲಿ ಬಹಳಷ್ಟು ವೀರಮಾಹೇಶ್ವರ ಅರ್ಚಕರು, ಪುರೋಹಿತರು ಹಾಗೂ ಮಠಾಧೀಶರನ್ನು ನಾಡಿಗೆ ಕೊಟ್ಟ ಹೆಮ್ಮೆ ನಮಗಿದೆ. ಎಲ್ಲ ಸಾಧಕರು ಶಾಂತಿ ತಾಳ್ಮೆಯಿಂದಿದ್ದು ಆಧ್ಯಾತ್ಮ ಜ್ಞಾನ ಸಂಪತ್ತನ್ನು ಸ್ವೀಕರಿಸುವ ಸೌಭಾಗ್ಯ ಎಲ್ಲರಿಗೂ ಪ್ರಾಪ್ತವಾಗಲಿ ಎಂದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಕುಲಪತಿ ಬೆಳಗಾಲಪೇಟೆ ಹಿರೇಮಠದ ವಿದ್ವಾನ್ ಸಿದ್ದಲಿಂಗಯ್ಯ ಮಾತನಾಡಿ, ವಿದ್ಯೆ ಸಾಧಕನ ಅಮೂಲ್ಯ ಸಂಪತ್ತು. ಜೀವನ ಬದಲಿಸಿಕೊಳ್ಳಲು ಎಲ್ಲರಿಗೂ ಸಮಯ ಸಿಗುತ್ತದೆ. ಸಮಯ ಬದಲಿಸಲು ಮತೊಮ್ಮೆ ಜೀವನ ಸಿಗದು. ತಿಳಿದವರೊಂದಿಗೆ ಅರ್ಧ ಗಂಟೆ ಕಳೆದರೆ ನಾಲ್ಕು ಪುಸ್ತಕ ಓದಿದಂತೆ. ನೋಡುವ ದೃಷ್ಟಿ ಕೈಕೊಂಡ ಕಾರ್ಯ ಉತ್ತಮವಾಗಿದ್ದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ಗುರುಕುಲದ ಎಲ್ಲಾ ಸಾಧಕರು. ಶ್ರದ್ಧೆ ನಿಷ್ಠೆಯಿಂದ ಜ್ಞಾನ ಸಂಪತ್ತನ್ನು ಸಂಪಾದಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಜೂನ್ ತಿಂಗಳ ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ರಂಭಾಪುರಿ ಜಗದ್ಗುರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಪವಿತ್ರ ಸಮಾರಂಭದಲ್ಲಿ ಸಾಧಕರು ಮತ್ತು ಜ್ಞಾನ ಸಂಪಾದಿಸಿಕೊಳ್ಳುವ ಕೆಲವು ಗಣ್ಯರು ಉಪಸ್ಥಿತರಿದ್ದರು. ಗುರುಕುಲ ಸಾಧಕರು ವೇದಘೋಷ ಮಾಡಿ, ಅರ್ಚಕ ಬಳಗದವರು ಪಾರ್ಥಿಸಿದರು. ನೀಲೂರು ಹಿರೇಮಠದ ಮಡಿವಾಳ ದೇವರು ನಿರೂಪಿಸಿದರು.೦೧ಬಿಹೆಚ್‌ಆರ್ ೧: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಗುರುಕುಲದ 32ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಜೂನ್ ತಿಂಗಳ ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’