- ಸರ್ಕಾರಿ ಶಾಲೆಗಳು ನಲುಗಿ ಹೋಗುವಂತಹ ಪರಿಸ್ಥಿತಿ ಇದೆ
ಬಂಡಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಭಿನ್ನವಾಗಿ ಶಾಲಾ ವಾರ್ಷಿಕೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.ತಾಲೂಕಿನ ಬಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ಒಂದು ವ್ಯಾಪಾರವಾಗಿದ್ದು ಇದರ ನಡುವೆ ಸರ್ಕಾರಿ ಶಾಲೆಗಳು ನಲುಗಿ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ದಿನಮಾನಗಳಲ್ಲಿ ಇಲ್ಲೊಂದು ಸರ್ಕಾರಿ ಶಾಲೆ ಎಲ್ಲದರಲ್ಲೂ ಮೇಲುಗೈ ಸಾಧಿಸುವ ಮೂಲಕ ಖಾಸಗಿ ಶಾಲೆಗೆ ಕಮ್ಮಿ ಇಲ್ಲ ಎಂಬುದನ್ನ ಸಾಕ್ಷಿ ಸಮೇತ ದೃಢಪಡಿಸಿದೆ ಎಂದರು.
ನಾವೆಲ್ಲರೂ ಕೂಡ ಈ ಶಾಲೆಯ ವ್ಯವಸ್ಥೆಯನ್ನು ನೋಡಿ ಕಣ್ತುಂಬಿಕೊಂಡು ತುಂಬಾ ಖುಷಿಯನ್ನು ಪಟ್ಟಿದ್ದೇವೆ. ನಮ್ಮ ಹನೂರು ಶೈಕ್ಷಣಿಕ ವಲಯದ ಇನ್ನಿತರ ಸರ್ಕಾರಿ ಶಾಲೆಗಳು ಸಹ ಇದೇ ಮಾದರಿಯಲ್ಲಿ ಬೆಳೆದರೆ ಉತ್ತಮವಾಗಿರುತ್ತದೆ ಎಂದರು.ಚಲನಚಿತ್ರ ನಿರ್ದೇಶಕ ಚೇತನ್ ಕುಮಾರ್ ಮಾತನಾಡಿ, ಹಳ್ಳಿಗಾಡಿನಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಅನೇಕ ಪ್ರತಿಭೆಗಳು ಹುಟ್ಟುತ್ತವೆ. ಇಂತಹ ಬಂಡಳ್ಳಿ ಗ್ರಾಮದಲ್ಲಿ ಹುಟ್ಟಿದಂತಹ ಪ್ರತಿಭೆ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್.ಮಹೇಂದರ್ ಇಂದು ದೇಶದಾದ್ಯಂತ ಉತ್ತಮ ಹೆಸರು ಮಾಡಿದ್ದಾರೆ. ಅವರ ಚಿತ್ರಗಳನ್ನು ನೋಡುತ್ತಾ ಬೆಳೆದಂತಹ ನಾವು ಅವರಿಂದಲೇ ಸ್ಫೂರ್ತಿ ಪಡೆದು ಅವರಂತೆ ಆಗಿದ್ದೇವೆ. ಹಾಗಾಗಿ ಸರ್ಕಾರಿ ಶಾಲಾ ಮಕ್ಕಳು ಹೆಚ್ಚು ಪ್ರತಿಭೆಗಳನ್ನು ಒಳಗೊಂಡಂತ ಮಕ್ಕಳಾಗಿದ್ದು ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡುವ ಕಡೆ ಗಮನ ವಹಿಸಬೇಕು ಎಂದರು.
ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ನೃತ್ಯಗಳು ನೆರೆದಿದ್ದ ಸಭಿಕರನ್ನ ಮನೋರಂಜನೆಯ ಜೊತೆಗೆ ಪುಳಕಿತಗೊಳಿಸಿದವು. ಬಣ್ಣ ಬಣ್ಣದ ಚಿತ್ತಾರಗಳನ್ನು ಒಳಗೊಂಡಂತಹ ಆಕರ್ಷಕ ಕೊಡುಗೆಗಳನ್ನು ತೊಟ್ಟು ಮಕ್ಕಳು ವಿವಿಧ ಹಾಡುಗಳಿಗೆ ನೃತ್ಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
---------
ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವವನ್ನು ಶಾಸಕ ಮಂಜುನಾಥ್ ಉದ್ಘಾಟಿಸಿದರು.