ಶಿಕ್ಷಣ, ಆರೋಗ್ಯ ಕ್ಷೇತ್ರ ಸಮಾಜದ ಎರಡು ಕಣ್ಣುಗಳು: ಸಂಸದ ತುಕಾರಾಂ

KannadaprabhaNewsNetwork |  
Published : Sep 06, 2024, 01:13 AM IST
ಸ | Kannada Prabha

ಸಾರಾಂಶ

ದೇವಸ್ಥಾನದ ಗಂಟೆಯ ಜೊತೆಗೆ ಶಾಲೆಯ ಗಂಟೆ ಬಾರಿಸಿದಾಗ ನಾವು ಉದ್ಧಾರವಾಗುವುದರ ಜೊತೆಗೆ ಸಮಾಜವೂ ಉದ್ಧಾರವಾಗಲಿದೆ.

ಸಂಡೂರು: ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ನಮ್ಮ ಹಾಗೂ ದೇಶದ ಪ್ರಗತಿಗೆ ಶಿಕ್ಷಣ ಬೆನ್ನೆಲುಬು ಇದ್ದಂತೆ. ಶಿಕ್ಷಕರ ಋಣ ತೀರಿಸಲು ಸಾಧ್ಯವಿಲ್ಲ ಎಂದು ಸಂಸದ ಈ.ತುಕಾರಾಂ ಅಭಿಪ್ರಾಯಪಟ್ಟರು.ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇವಸ್ಥಾನದ ಗಂಟೆಯ ಜೊತೆಗೆ ಶಾಲೆಯ ಗಂಟೆ ಬಾರಿಸಿದಾಗ ನಾವು ಉದ್ಧಾರವಾಗುವುದರ ಜೊತೆಗೆ ಸಮಾಜವೂ ಉದ್ಧಾರವಾಗಲಿದೆ. ಶಿಕ್ಷಕರ ಕೊರತೆ ನೀಗಿಸಲು ಎನ್‌ಎಂಡಿಸಿ ಸಂಸ್ಥೆಯ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ೨೦೦ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ಅಕ್ಷರ ಆವಿಷ್ಕಾರ ಯೋಜನೆ ಅಡಿಯಲ್ಲಿ ೨೮ ಶಾಲೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಶಾಲಾ ಆಸ್ತಿಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ತಾಲೂಕಿನ ೧೨೨ ಶಾಲೆಗಳ ಆಸ್ತಿಯನ್ನು ಇಲಾಖೆ ಹೆಸರಿಗೆ ನೋಂದಣಿ ಮಾಡಲಾಗಿದೆ. ಅಂಗನವಾಡಿಯಿಂದ ಪಿಜಿವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು, ಸಂಪೂರ್ಣ ಸಾಕ್ಷರತೆ ಸಾಧಿಸಲು ಹಾಗೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ತಾಲೂಕನ್ನು ನಂ.೧ ತಾಲೂಕನ್ನಾಗಿಸಲು ಶ್ರಮಿಸಲಾಗುತ್ತಿದೆ ಎಂದರು.

₹೫೦ ಕೋಟಿ ವೆಚ್ಚದಲ್ಲಿ ಸಂಡೂರು ಪಟ್ಟಣಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲು ಎರಡನೇ ಹಂತದ ಪೈಪ್‌ಲೈನ್ ಅಳವಡಿಕೆ, ತಲಾ ₹೨೪ ಕೋಟಿ ವೆಚ್ಚದಲ್ಲಿ ಸಂಡೂರು ಹಾಗೂ ಅಂತಾಪುರ ಗ್ರಾಮದಲ್ಲಿ ಸಬ್ ಸ್ಟೇಷನ್ ಆರಂಭಿಸಲು ಅನುಮೋದನೆ ದೊರೆತಿದೆ. ತಾಲೂಕು ಆಡಳಿತ ಸೌಧದ ಪಕ್ಕದ ಎರಡು ಎಕರೆ ಜಾಗದಲ್ಲಿ ₹೧೨ ಕೋಟಿ ವೆಚ್ಚದಲ್ಲಿ ನ್ಯಾಯಾಲಯದ ಕಟ್ಟಡವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ಹಂಪಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ್ ನಾಯಕ್ ಉಪನ್ಯಾಸ ನೀಡಿ, ಜ್ಞಾನಪೂರ್ಣ ನಾಡನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಗುಣಮಟ್ಟದ ಶಿಕ್ಷಣ ಇಲ್ಲದಿದ್ದರೆ, ಉತ್ತಮ ರಾಷ್ಟ್ರ ನಿರ್ಮಾಣ ಕಷ್ಟಕರವಾಗಲಿದೆ. ಉದ್ಯೋಗ ಸೃಷ್ಟಿಸುವ, ಕೌಶಲ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.

ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬಿಇಒ ಡಾ.ಐ.ಆರ್. ಅಕ್ಕಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಿಕೆಜಿ ಫೌಂಡೇಶನ್ ಮುಖ್ಯಸ್ಥ ಬಿ.ನಾಗನಗೌ, ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಸಿರಾಜ್ ಹುಸೇನ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ, ಬಿಇಒ ಕಚೇರಿಯಿಂದ ವರ್ಗಾವಣೆಗೊಂಡ ನೌಕರರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಗಣೇಶನ ಜನ್ಮ ವೃತ್ತಾಂತ ಕುರಿತ ನೃತ್ಯರೂಪಕವನ್ನು ಪ್ರದರ್ಶಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕೆ. ಸ್ವಾಗತಿಸಿದರು. ಬಿಆರ್‌ಪಿ ಜಕಣಾಚಾರಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮ ಬಹಿಷ್ಕರಿಸಿದ ಸದಸ್ಯರು:

ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಬಹಿಷ್ಕರಿಸಿ, ತಮ್ಮ ಶಾಲೆಗಳಲ್ಲಿಯೇ ಕಪ್ಪುಪಟ್ಟಿ ಧರಿಸಿ ಶಿಕ್ಷಕರ ದಿನವನ್ನು ಆಚರಿಸಿದರು.

ಪುರಸಭೆ ಉಪಾಧ್ಯಕ್ಷೆ ಲತಾ ಎಂ.ಸಿ ಉಜ್ಜಪ್ಪ, ಪಿ.ಎಂ. ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕ ಪಿ.ಶ್ರೀಧರ್‌ಮೂರ್ತಿ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಾಗರಾಜ, ಬಿ.ಎಂ. ಶಶೀಧರ್, ಕೆ. ವೀರಪ್ಪ, ಎಚ್. ಕೊಟ್ರೇಶಿ, ಕೆ.ಟಿ. ಗುರುಪ್ರಸಾದ್, ಕೆ. ಕುಮಾರಸ್ವಾಮಿ, ಜಿ.ಸಿ. ಶಿವಕುಮಾರ್, ಟಿಎಂ. ಪುರುಷೋತ್ತಮ, ಮುಖಂಡರಾದ ಕೆ. ಸತ್ಯಪ್ಪ, ಜಿ.ಎಸ್. ಸೋಮಪ್ಪ, ಹಗರಿ ಬಸವರಾಜಪ್ಪ, ಜಿ. ವೀರೇಶ್, ವೆಂಕಟಸುಬ್ಬಯ್ಯ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!