ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದಿಂದ ನಡೆದ ವಿಶೇಷ ಸರ್ವ ಸದಸ್ಯರ ಸಭೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರಸ್ತುತ ಸಮಾಜದಲ್ಲಿ ಎದುರಾಗುವ ಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಸಹಕಾರಿ ಎಂದು ಸಾಮಾಜಿಕ ಕಾರ್ಯಕರ್ತೆ ಪಲ್ಲವಿ ಸಿ.ಟಿ. ರವಿ ಹೇಳಿದರು.ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಮಂಗಳವಾರ ನಡೆದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳಿಗೆ ಇಂದು ಹೆಚ್ಚಿನ ಸ್ಥಾನಮಾನ ದೊರೆಯುತ್ತಿದೆ. ಇದಕ್ಕೆ ಕಾರಣ ಶಿಕ್ಷಣ. ಈ ನಿಟ್ಟಿನಲ್ಲಿ ಸರ್ವರೂ ಇದರ ಸದುಪಯೋಗ ಪಡಿಸಿ ಕೊಳ್ಳಬೇಕು ಎಂದ ಅವರು, ಹೆಣ್ಣು ಮಕ್ಕಳಿಗೆ ತಾಯಿಯೇ ಮೊದಲ ಗುರು, ಅವರಿಂದ ಸಂಸ್ಕೃತಿ, ಸಂಸ್ಕಾರ, ಧಾರ್ಮಿಕ ಮನೋಭಾವ ಕಲಿಯುವುದಕ್ಕೆ ಪ್ರೇರಣೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಜಂಟಿ ನಿರ್ದೇಶಕಿ ಬಿ.ಎಲ್. ಶ್ವೇತ ಮಾತನಾಡಿ, ಎಲ್ಲಾ ರಂಗದಲ್ಲಿಯೂ ಮಹಿಳೆ ಮುಂದೆ ಇದ್ದಾರೆ. ಎಲ್ಲಾ ರೀತಿಯಲ್ಲಿಯೂ ಸಬಲರಾಗಿದ್ದಾರೆ. ಈ ಸಾಮರ್ಥ್ಯವನ್ನು ಒಂದು ಕುಟುಂಬದ ಜೊತೆ ಜೊತೆಗೆ ತೆಗೆದುಕೊಂಡು ಹೋಗಬೇಕೆಂದು ಕರೆ ನೀಡಿದರು.ಓರ್ವ ಮಹಿಳೆ ಸಮಾಜದಲ್ಲಿ ಯಶಸ್ವಿಯಾಗಿ ತಲೆ ಎತ್ತಿ ಸಾಧನೆ ಮಾಡಿ ನಿಲ್ಲಬೇಕಾದರೆ ಅದರ ಹಿಂದೆ ಆ ಕುಟುಂಬದ ಪರಿಶ್ರಮ ಇರುತ್ತದೆ. ವೈಯಕ್ತಿಕವಾಗಿ ನಾನೂ ಸಹ ಎಂದು ಹೇಳಿದರು.ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಮಾತನಾಡಿ, ಮಹಿಳಾ ಒಕ್ಕಲಿಗರ ಸಂಘದಲ್ಲಿ ಹಿಂದೆ ಸೇವೆ ಸಲ್ಲಿಸಿ ಯಶಸ್ವಿಯಾಗಿ ಆಡಳಿತ ನಡೆಸಿರುವುದು ಮಾದರಿಯಾಗಿ ಇಂದಿನ ಪದಾಧಿಕಾರಿಗಳಿಗೆ ಅಡಿಪಾಯ ಹಾಕಿದ್ದಾರೆ. ಮಹಿಳಾ ಸಂಘ ಸಮಾಜಮುಖಿ ಕಾರ್ಯ ಕೈಗೊಳ್ಳುವಲ್ಲಿ ಮುಂದಿನ ದಿನಗಳಲ್ಲಿ ಸಂಘ ಉನ್ನತ ಶ್ರೇಣಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಒಕ್ಕಲಿಗರ ಸಮಾಜ ಸಂಸ್ಕಾರ, ಸಂಸ್ಕೃತಿ ತಿಳಿ ಹೇಳುವುದು ಇಂದಿನ ಕಾರ್ಯಕ್ರಮದ ಮುಖ್ಯ ಉದ್ದೇಶ, ಇಂದು ಆಸ್ತಿ ಅಂತಸ್ತಿನ ಕಡೆ ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ ಎಂದು ವಿಷಾಧಿಸಿದ ಅವರು, ಪ್ರಸ್ತುತ ಹಣದ ಆಸೆಗೆ ಬಿದ್ದು, ಭೂಮಿ ಯನ್ನು ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಒಕ್ಕಲಿಗ ಕುಟುಂಬ ವ್ಯವಸ್ಥೆಯಿಂದ ಹೊರಗಡೆ ಇರುವವರಿಗೆ ನಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುತ್ತಿರುವುದರಿಂದ ಒಕ್ಕಲಿಗ ಜನಾಂಗದ ಅಳಿವಿನ ಪ್ರಶ್ನೆಯಾಗಿದೆ ಎಂದು ಎಚ್ಚರಿಸಿದರು.ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯ ಸುಕುಮಾರ್, ಕಾರ್ಯದರ್ಶಿ ಅಮಿತ ವಿಜೇಂದ್ರ, ಸಹ ಕಾರ್ಯದರ್ಶಿ ಕೋಮಲ ರವಿ, ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಟಿ.ಡಿ.ಮಲ್ಲೇಶ್, ಗೌರವ ಕಾರ್ಯದರ್ಶಿ ಎಂ.ಎಸ್.ಪ್ರದೀಪ್‌ಕುಮಾರ್, ನಿರ್ದೇಶಕರಾದ ಹರಿಣಾಕ್ಷಿ ನಾಗರಾಜ್, ಭವ್ಯ ನಟೇಶ್, ಪವಿತ್ರ ರತೀಶ್, ಸಿ.ಟಿ.ರೇವತಿ ಧರ್ಮರಾಜ್, ಮಾಜಿ ಅಧ್ಯಕ್ಷರಾದ ಸವಿತಾ ರಮೇಶ್, ಜಾಹ್ನವಿ ಜಯರಾಮ್, ನಿರ್ದೇಶಕರಾದ ಶಕುಂತಲಾ, ಮಂಜುಳಾ, ವೇದಾ, ಚಂಪಾ, ಅನುಪಮಾ, ವಿನುತಾ, ರಾಜೇಶ್ವರಿ, ಕೀರ್ತಿ, ತನುಜಾ, ಸುನಿತಾ, ಸಂಧ್ಯಾ ಉಪಸ್ಥಿತರಿದ್ದರು. 18 ಕೆಸಿಕೆಎಂ 3ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಮಂಗಳವಾರ ಏರ್ಪಡಿಸಿದ್ದ ವಿಶೇಷ ಸರ್ವ ಸದಸ್ಯರ ಸಭೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪಲ್ಲವಿ ಸಿ.ಟಿ. ರವಿ ಉದ್ಘಾಟಿಸಿದರು. ಟಿ. ರಾಜ ಶೇಖರ್, ರೀನಾ ಸುಜೇಂದ್ರ, ಸವಿತಾ ರಮೇಶ್, ಕಾವ್ಯ ಸುಕುಮಾರ್ ಇದ್ದರು.