ಹೊಸಹಳ್ಳಿಯ 58 ಎಕರೆ ಪ್ರದೇಶದಲ್ಲಿ ಎಜುಕೇಶನ್ ಹಬ್‌ ನಿರ್ಮಾಣ: ಕೆ.ಎಂ.ಉದಯ್

KannadaprabhaNewsNetwork |  
Published : Aug 25, 2026, 02:00 AM IST
24ಕೆಎಂಎನ್ ಡಿ13  | Kannada Prabha

ಸಾರಾಂಶ

ಈಗಾಗಲೇ ಮದ್ದೂರು ತಾಲೂಕಿನಲ್ಲಿ 9 ವಸತಿ ಶಾಲೆಗಳು ಇದ್ದು, ಇನ್ನು ಒಂದು ವಸತಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಕೂಡ ಆದಷ್ಟು ಬೇಗ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಹಳ್ಳಿಯ 58 ಎಕರೆ ಪ್ರದೇಶದಲ್ಲಿ ಎಜುಕೇಶನ್ ಹಬ್‌ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ಹೊಸಹಳ್ಳಿಯಲ್ಲಿ ಅಂದಾಜು 22 ಕೋಟಿ ರು. ವೆಚ್ಚದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ವಸತಿ ಶಾಲೆ ಇದುವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಸ್ಥಳ ನಿಗದಿ ಮಾಡಿದ್ದರೂ ಸಹ ಗ್ರಾಮಸ್ಥರ ವಿರೋಧಿಯಿಂದಾಗಿ ನಿರ್ಮಾಣ ಕಾರ್ಯ ವಿಳಂಬವಾಗಿತ್ತು ಎಂದರು.

ಈಗ ಆ ಸಮಸ್ಯೆ ಬಗೆಹರಿಸಲಾಗಿದೆ. ಉತ್ತಮ ಪರಿಸರದ ಮಧ್ಯೆ ಇರುವ ಹೊಸಹಳ್ಳಿಯಲ್ಲಿ ಅಂಬೇಡ್ಕರ್ ವಸತಿ ಶಾಲೆ, ಹೈಟೆಕ್ ಸರ್ಕಾರಿ ಶಾಲೆ, ಪಿಯುಸಿ ಶಾಲೆ ಸೇರಿದಂತೆ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಸರ್ಕಾರದಿಂದ ಪ್ರಾರಂಭಿಸುವ ಮೂಲಕ ಎಜುಕೇಶನ್ ಹಬ್, ಶಿಕ್ಷಣ ಕೇಂದ್ರ ನಿರ್ಮಾಣ ಮಾಡಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಗುಣಾತ್ಮಕ ಶಿಕ್ಷಣ, ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದೇ ಪ್ರದೇಶದಲ್ಲಿ ಕಾರ್ಮಿಕ ವಸತಿ ಶಾಲೆಗೆ 10 ಎಕರೆ ಮಂಜೂರು ಮಾಡಲಾಗಿದೆ. ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು. ಅದರ ಜೊತೆಗೆ ಎರಡು ಗ್ರಾಪಂಗೆ ಒಂದು ಸರ್ಕಾರಿ ಶಾಲೆಯನ್ನು ಹೈಟೆಕ್ ಶಾಲೆಯನ್ನಾಗಿ ಮೇಲ್ದರ್ಜೇಗೇರಿಸಲು ಅಧಿವೇಶನದಲ್ಲಿ ಚರ್ಚೆ ಮಾಡಲಾಗಿದೆ ಎಂದರು.

ಈಗಾಗಲೇ ತಾಲೂಕಿನಲ್ಲಿ 9 ವಸತಿ ಶಾಲೆಗಳು ಇದ್ದು, ಇನ್ನು ಒಂದು ವಸತಿ ಶಾಲೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಕೂಡ ಆದಷ್ಟು ಬೇಗ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಥಮ ದರ್ಜೆ ಕಾಲೇಜು ಇರಲಿಲ್ಲ. ಹೀಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸಿಎಂ ಅನುಮೋದನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ತಾಲೂಕಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ಕೆಲವರು ಉಧ್ಯಮವಾಗಿ ಮಾಡಿಕೊಂಡಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡಬೇಕು. ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಾತ್ಮಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವು ಮಹನೀಯರು ಮಹತ್ತರ ಸಾಧನೆಗಳನ್ನು ಮಾಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ಹೀಗಾಗಿ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಪಾಲಕರು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್‌ನಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಆಧ್ಯತೆ ನೀಡಲಾಗುತ್ತಿದೆ ಎಂದರು.

ವೇಳೆ ಬಿಇಒ ಎಸ್.ಬಿ.ಧನಂಜಯ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ಎನ್.ಎಂ.ಪ್ರಕಾಶ್, ಕದಲೂರು ತಿಮ್ಮೇಗೌಡ, ಮುಖಂಡರಾದ ತಮ್ಮಣ್ಣ, ಲಿಂಗರಾಜು, ರಾಮಕೃಷ್ಣ, ಅಶ್ವಿನಿ, ಸುಬ್ಬಾರೆಡ್ಡಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಸೇತುವೆ ದುರಸ್ತಿ ಮರೀಚಿಕೆ
ಜನಸಾಮಾನ್ಯರ ಕೆಲಸ ಮಾಡಿಕೊಡಲು ಪಕ್ಷ ಭೇದ ಬೇಡ: ಡಾ.ಕೆ.ಸುಧಾಕರ್