ಸೋಮವಾರಪೇಟೆ: ವಿದ್ಯೆ ಎಂಬುದೇ ಅಪೂರ್ವ ಸಂಪತ್ತು. ವಿದ್ಯಾದಾನ ಮಹಾನ್ ಕಾರ್ಯ ಎಂದು ಶಾಸಕ ಡಾ. ಮಂತರ್‌ಗೌಡ ಅಭಿಪ್ರಾಯಿಸಿದರು.
ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ನೂತನ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಮಕ್ಕಳು ಓದಲೇಬೇಕು. ವಿದ್ಯೆಯೇ ನಮ್ಮನ್ನು ಉನ್ನತ ಸ್ಥಾನಕ್ಕೆ ತಲುಪಿಸುತ್ತದೆ. ಕಲಿತ ವಿದ್ಯೆಯನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ರ‍್ಯಾಂಕ್‌ಗಳನ್ನು ಗ್ರಾಮೀಣ ಮಕ್ಕಳು ಪಡೆಯುತ್ತಿದ್ದಾರೆ ಎಂಬುದೇ ನಮಗೆ ಹೆಮ್ಮೆ ಎನಿಸುತ್ತದೆ. ಮಕ್ಕಳ ಕಲಿಕೆಗೆ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡುವುದು ಅವರ ಜವಾಬ್ದಾರಿಯಾಗಿದೆ. ಓದು ಮುಂದುವರಿಸಲು ಕಷ್ಟವಾದ ಕುಟುಂಬಗಳು ಹಿಂಜರಿಕೆಯಿಲ್ಲದೆ ಸಹಾಯ ಕೇಳಬೇಕು. ನಾನು ಕೂಡ ಎಲ್ಲಾ ಸಂದರ್ಭದಲ್ಲೂ ಸಹಾಯ ಮಾಡುತ್ತೇನೆ. ಸಂಘ-ಸಂಸ್ಥೆಗಳು, ದಾನಿಗಳು ಕೂಡ ಶಿಕ್ಷಣ ಮುಂದುವರಿಸಲು ಅವಶ್ಯಕತೆಯಿದ್ದವರಿಗೆ ಸಹಾಯ ಮಾಡುತ್ತಾರೆ ಎಂದು ಹೇಳಿದರು.ಒಕ್ಕಲಿಗ ರೈತಾಪಿ ಕುಟುಂಬಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಪ್ರತಿ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲೇಬೇಕು. ಈ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘದವರು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಹೆಸರಿನಲ್ಲಿ ಆಂಗ್ಲಮಾಧ್ಯಮದಲ್ಲಿ ಶಾಲಾ, ಕಾಲೇಜು ತೆರೆದು, ವಿದ್ಯಾದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ಒಕ್ಕಲಿಗರ ಸಂಘದ ಅಧ್ಯಕ್ಷರಾದ ಎ.ಆರ್.ಮುತ್ತಣ್ಣ ಮಾತನಾಡಿ, ಕಳೆದ 9 ವರ್ಷಗಳಿಂದ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆಯಲಾಗಿದೆ. ಪ್ರಸಕ್ತ ವರ್ಷ ಜಿಲ್ಲಾ ಮಟ್ಟದಲ್ಲಿ ಮೂರು ರ‍್ಯಾಂಕ್‌ಗಳು ನಮ್ಮ ಕುವೆಂಪು ವಿದ್ಯಾಸಂಸ್ಥೆಗೆ ಸಿಕ್ಕಿದೆ. ಪಿಯುಸಿ ವಿಭಾಗದ ವಿಜ್ಞಾನ ವಿಭಾಗದಲ್ಲೂ ಶೇ.100 ರಷ್ಟು ಫಲಿತಾಂಶ ಸಿಕ್ಕಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಿ.ಎಸ್.ಆದ್ವಿ, ಕೆ.ಸಿ. ಪಂಚಮಿ, ಕೆ.ಎಸ್. ತೇಜಸ್ವಿನಿ ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಮಹಮ್ಮದ್ ಇರ್ಮಾನ್, ಎಸ್.ವೈ. ಹಿಮಾನಿ, ವೈ.ಎಸ್.ಧನ್ಯ, ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದ ಕೆ.ಎಂ. ಸೃಷ್ಟಿ, ಎಂ.ಡಿ. ಖುಷಿ, ಡಿ.ಎಸ್. ಸ್ನೇಹ ಅವರನ್ನು ಅಭಿನಂಧಿಸಲಾಯಿತು. ಇದೇ ಸಂದರ್ಭ ದಾನಿಗಳನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಬೆಂಗಳೂರಿನ ಉದ್ಯಮಿಗಳಾದ ಕೆ.ಟಿ. ಬೆಳ್ಳಿಗೌಡ, ಮಂಜೂರು ತಮ್ಮಣಿ, ಸಂಘದ ಉಪಾಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಗೌರವ ಕಾರ್ಯದರ್ಶಿ ಎನ್.ಬಿ. ಗಣಪತಿ, ಖಜಾಂಚಿ ಜಿ.ಪಿ. ಲಿಂಗರಾಜು, ವಿದ್ಯಾಸಂಸ್ಥೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್, ಸಮುದಾಯಭವನ ಉಸ್ತುವಾರಿ ಕೆ.ಟಿ.ಪರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಮತ್ತು ಸಂಘದ ನಿರ್ದೇಶಕರು, ವಿಶೇಷ ಅಹ್ವಾನಿತರಾದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ. ಚಂಗಪ್ಪ, ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್, ನಗರ ಗೌಡ ಒಕ್ಕೂಟದ ಅಧ್ಯಕ್ಷ ಎಂ.ಎಂ. ಪ್ರಕಾಶ್ ಇದ್ದರು.