ಕನ್ನಡಪ್ರಭ ವಾರ್ತೆ ಮೂಡಲಗಿ
ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದೆ ಶೂನ್ಯ ಬಂಡವಾಳದೊಂದಿಗೆ ಆರಂಭಿಸಲಾದ ಹುಣಶ್ಯಾಳ ಪಿಜಿ ಗ್ರಾಮದ ಇಂಚಲ ತೋಟದ ಶಾಲೆಯ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿರುವ ಇಂಚಲ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಶ್ರೀನಿವಾಸ ರಾಮಾನುಜ ಗಣಿತ ಪ್ರಯೋಗಾಲಯದ ಕುರಿತು ಮೆಚ್ಚುಗೆ ಸೂಚಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಆರಂಭಿಸುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಸಲೀಸಾಗಿ ಹೇಳಿಕೊಡುತ್ತಿದ್ದಾರೆ. ಯಾವುದೇ ಹಣಕಾಸಿನ ನೆರವಿಲ್ಲದೆ ಶಾಲೆಯ ಕೊಠಡಿಯೊಂದರಲ್ಲಿ ಗಣಿತದ ಎಲ್ಲ ಪ್ರಕಾರಗಳ ಪರಿಕಲ್ಪನೆಗಳನ್ನು ಅಳವಡಿಸಿ ವಿದ್ಯಾರ್ಥಿಗಳ ಕಲಿಕಾಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದಕ್ಕಾಗಿ ಇಡೀ ಶಿಕ್ಷಕ ಸಮೂಹವನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.ವಿದ್ಯಾರ್ಥಿ ಜೀವನ ಅಮೂಲ್ಯವಾದುದ್ದು. ಕಲಿಯುವ ವಯಸ್ಸನ್ನು ಎಂದಿಗೂ ಹಾಳು ಮಾಡಿಕೊಳ್ಳಬೇಡಿ. ಸಮಯವನ್ನು ಎಂದಿಗೂ ವ್ಯರ್ಥ ಮಾಡಿಕೊಳ್ಳಬೇಡಿ. ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ನಲಿ- ಕಲಿ ಕೊಠಡಿಗೆ ₹1.50 ಲಕ್ಷ ವಂತಿಗೆಯನ್ನು ಸಾರ್ವಜನಿಕರು ನೀಡಿರುವುದು ಶೈಕ್ಷಣಿಕ ಕಾಳಜಿ ಬಿಂಬಿಸುತ್ತದೆ. ಪ್ರತಿಯೊಂದು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಇಲ್ಲಿಯ ಜನರು ಅತ್ಯುತ್ಸಾಹದಿಂದ ಭಾಗವಹಿಸಿ ಉತ್ತೇಜಿಸುವ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ವೇಳೆ ಮೂಡಲಗಿ ಬಿಇಒ ಎ.ಸಿ.ಮನ್ನಿಕೇರಿ, ಮುಖಂಡರಾದ ಅವ್ವಣ್ಣ ಡಬ್ಬನ್ನವರ, ಶಂಕರ ಇಂಚಲ, ಪುಂಡಲೀಕ ಸುಂಕದ, ರಾಮನಾಯಿಕ ನಾಯಿಕ, ಶಬ್ಬೀರ್ ತಾಂಬಿಟಗಾರ, ಬಸು ಕಾಡಾಪೂರ, ಲಾಲಸಾಬ್ ಜಮಾದಾರ, ಮಹಾದೇವ ಖಡಿ, ಸುರೇಶ ಚಿಕ್ಕೋಡಿ, ಪಿಡಿಒ ಶಿವಾನಂದ ಗುಡಸಿ, ಸಿಆರ್‌ಪಿ ಆನಂದ ಹಮ್ಮನ್ನವರ, ಶಾಲೆಯ ಮುಖ್ಯಶಿಕ್ಷಕ ಮಹಾಂತೇಶ ಮಾಳಗೆ, ಎಸ್‌ಡಿಎಂಸಿ ಸದಸ್ಯರು ಇತರರು ಇದ್ದರು.ದೇವರು, ತಾಯಿ-ತಂದೆ ಮತ್ತು ಜನರ ಆಶೀರ್ವಾದದಿಂದ ಬರುವ ಮೇ ತಿಂಗಳದಂದು ಅರಬಾವಿ ಶಾಸಕನಾಗಿ 21 ವರ್ಷ ಪೂರ್ತಿಯಾಗುತ್ತೆ. ಶಾಸಕನಾಗಿ ಜನಸೇವೆ ಮಾಡುತ್ತಿರುವುದು ತುಂಬಾ ಖುಷಿಯಾಗಿದೆ. ನನ್ನ ಅವಧಿಯಲ್ಲಿ ಎಲ್ಲ ಕೆಲಸಗಳಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದೇನೆ. ನಂತರ ಬೇರೆ ಬೇರೆ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ಸಮಾಜದ ಪ್ರಗತಿಯಲ್ಲಿ ಶಿಕ್ಷಣವೊಂದೇ ಪ್ರಮುಖ ಸಾಧನವಾಗಿದೆ.
-ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾವಿ.