ಉತ್ತಮ ಪ್ರಜೆಯಾಗಲು ಶಿಕ್ಷಣ ಅವಶ್ಯ: ಕುಲಪತಿ ಡಾ. ಕೆ.ಸಿ.ವೀರಣ್ಣ

KannadaprabhaNewsNetwork | Published : Mar 28, 2024 12:52 AM

ಸಾರಾಂಶ

ಪಾಲಕರು ತಮ್ಮ ಮಕ್ಕಳ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಅದೇ ಕ್ಷೇತ್ರದಲ್ಲೆ ಅವರಿಗೆ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ತಿಳಿಸಿದರು. ಬೀದರ್‌ನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಯುಕೆಜಿ ಮಕ್ಕಳ ಪದವಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಬೀದರ್‌

ಶಿಕ್ಷಣವು ವಿದ್ಯಾರ್ಥಿಗಳ ನಡವಳಿಕೆಯಲ್ಲಿ ಬದಲಾವಣೆಯಾಗಿ ಸಮಾಜಕ್ಕೆ ಅನುಕೂಲಕರವಾಗಿ ಅವರು ನಡೆದುಕೊಳ್ಳುವಂತೆ ಮಾಡುವುದಾಗಿದೆ. ಅವರನ್ನು ದೇಶದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಗ್ಲೋಬಲ್ ಸೈನಿಕ ಅಕಾಡೆಮಿ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ. ಕೆ.ಸಿ.ವೀರಣ್ಣ ನುಡಿದರು.

ನಗರದ ಬೆನಕನಹಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಬುಧವಾರ ಒಪನ್ ಜಿಮ್‌ಗಳ ಉದ್ಘಾಟನೆ ಹಾಗೂ ಯುಕೆಜಿ 2023-2024 ಬ್ಯಾಚ್‌ನ ಬೆನಕನಹಳ್ಳಿ, ಶಿವನಗರ ಮತ್ತು ಕುಂಬರವಾಡಾದ 3 ಶಾಖೆಯ ಮಕ್ಕಳಿಗೆ ಯುಕೆಜಿ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಅದೇ ಕ್ಷೇತ್ರದಲ್ಲೆ ಅವರಿಗೆ ಶಿಕ್ಷಣ ನೀಡಿ ಅವರನ್ನು ಪ್ರೋತ್ಸಾಹಿಸಬೇಕು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ವಿವಿಧ ವಿಭಿನ್ನ ಚಟುವಟಿಕೆಗಳ ಸಹಿತ ಈ ಭಾಗದಲ್ಲಿ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನ್ಪೂರೆ ಮಾತನಾಡಿ, ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಎರಡು ವರ್ಷದಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಮಕ್ಕಳಿಗೆ ಆಟೋಟಗಳ ಜೊತೆಗೆ ಪಾಠ ಕಲಿಸುವ ಗುರಿ ಹೊಂದಿದೆ ಮತ್ತು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಶಿಕ್ಷಣ ನೀಡುತ್ತಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಿಎಸ್‌ಎ ಇದಕ್ಕೆಂದೆ ಮಾ.16ರಿಂದ ಬೇಸಿಗೆ ಶಿಬಿರ ಕೂಡ ವಿಭಿನ್ನ ಚಟುವಟಿಕೆಗಳೊಂದಿಗೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಮಕ್ಕಳು ವಿಶೇಷ ಉಡುಗೆಯನ್ನು ಧರಿಸಿ ಸಂಭ್ರಮಿಸಿ, ಒಂದನೇ ತರಗತಿಗೆ ಮಕ್ಕಳು ಪ್ರವೇಶ ಪಡೆದ ನಿಮಿತ್ತ ಖುಷಿಯಲ್ಲಿ ತೇಲಾಡುತ್ತಿದ್ದರು. ಯುಕೆಜಿ ಮಕ್ಕಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೂರ್ವ ಪ್ರಾಥಮಿಕ ಶಿಕ್ಷಕರು ತಮ್ಮ ಅನುಭವವನ್ನು ಹಂಚಿಕೊಂಡರು. ಫೌಂಡೇಶನ್ ಸ್ಟೇಜ್ ಉಸ್ತುವಾರಿಯಾದ ಡಾ.ಮನಿಷ ಚಾಕಡೆ ವಾರ್ಷಿಕ ವರದಿ ಪ್ರಕಟಿಸಿದರು. ಮಕ್ಕಳು ಈ ಶೈಕ್ಷಣಿಕ ವರ್ಷದಲ್ಲಿ ಕೈಗೊಂಡ ಹಲವಾರು ಚಟುವಟಿಕೆಗಳ ಬಗ್ಗೆ ವಿಸ್ತೃತ ವರದಿ ನೀಡಿದರು. ಇಡಿ ವರ್ಷದಲ್ಲಿ ಕೈಗೊಂಡ ಹಲವಾರು ಚಟುವಟಿಕೆಗಳ ವಿವರಣೆಯ ಛಾಯಾಚಿತ್ರಗಳ ಮೂಲಕ ದರ್ಶಕರಿಗೆ ಪ್ರದರ್ಶಿಲಾಯಿತು.

ಸಮಾರಂಭದಲ್ಲಿ ಬಿವಿಬಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಠ್ಠಲ್ ರೆಡ್ಡಿ, ಸಿಆರ್‌ಪಿ ಮಾಣಿಕ ಪವಾರ, ಮುಖ್ಯಗುರು ಶಿವಕುಮಾರ, ಜ್ಯೋತಿ ರಾಗ, ಪಿಆರ್‌ಓ ಕಾರಂಜಿ ಸ್ವಾಮಿ, ಫೌಂಡೇಶನ್ ಸ್ಟೇಜ್ ಪ್ರಿನ್ಸಿಪಾಲ್‌ ಡಾ.ಮನಿಷಾ ಚಾಕೆಡ, ಪಾಲಕರು, ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article