ಮನುಷ್ಯ ಉನ್ನತಿಗೆ, ಗೌರವಾದರಕ್ಕೆ ಶಿಕ್ಷಣವೇ ಶಕ್ತಿ: ಶಂಕರ್ ಶೇಟ್

KannadaprabhaNewsNetwork | Published : Apr 12, 2024 1:02 AM

ಸಾರಾಂಶ

ಸೊರಬ ಪಟ್ಟಣದ ಗುರುಕುಲ ಶಾಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ಪ್ರೇರಣೆ, ನಿರಂತರ ಶ್ರಮ ಮತ್ತು ಆತ್ಮಸ್ಥೈರ್ಯ ವಿದ್ಯಾರ್ಥಿಯ ಸಾಧನೆಗೆ ಸಾಧನವಾಗುತ್ತದೆ. ಆದ್ದರಿಂದ ಛಲದಿಂದ ಮುನ್ನಡೆದರೆ ಯಶಸ್ಸು ಎನ್ನುವುದನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.

ಪಟ್ಟಣದ ಗುರುಕುಲ ಶಾಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮನುಷ್ಯನ ಉನ್ನತಿಗೆ ಮತ್ತು ಸಮಾಜದ ಗೌರವಗಳಿಗೆ ಆಧಾರವಾಗಿ ನಿಲ್ಲುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಈ ದೃಷ್ಟಿಯಿಂದ ಶಿಕ್ಷಣ ಎನ್ನುವುದು ಹುಲಿಯ ಹಾಲು ಇದ್ದಂತೆ. ಅದನ್ನು ಕುಡಿದವರು ಘರ್ಜಿಸಲೇ ಬೇಕು ಎಂದು ಹೇಳಿರುವ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ ಮಾತು ಇಂದಿಗೂ ಮತ್ತು ಭವಿಷ್ಯ ದಲ್ಲಿಯೂ ಪ್ರಸ್ತುವಾಗುತ್ತಲೇ ಸಾಗುತ್ತದೆ. ಆದ್ದರಿಂದ ವಿಶ್ವಾಸದಿಂದ ಮುನ್ನೆಡೆದರೆ ನಾವು ಸಾಧಿಸಬೇಕೆಂದಿರುವ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.

ಕಳೆದ ೧೦ ವರ್ಷಗಳಿಂದ ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರು ಮತ್ತು ಶಿಕ್ಷಣದಲ್ಲಿ ಉನ್ನತ ಸ್ಥಾನದಲ್ಲಿ ಅಂಕಗಳಿಸುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಬೆನ್ನು ತಟ್ಟುವ ಕೆಲಸ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ನಡೆಯುತ್ತಿದೆ. ಈಗಾಗಲೇ ೩೦೦ಕ್ಕೂ ಅಧಿಕ ಸಾಧಕರನ್ನು ಗುರ್ತಿಸಿ ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿ ಗೌರವಿಸಲಾಗಿದೆ ಎಂದರು.

ಸುರಭಿ ಯಕ್ಷ ಬಳಗದ ಅಧ್ಯಕ್ಷೆ ಲಕ್ಷ್ಮಿ ಮುರಳಿಧರ ಮಾತನಾಡಿ, ವಿದ್ಯೆ ಸೋಮಾರಿಯ ಸ್ವತ್ತಲ್ಲ, ಅದು ಸಾಧಕನ ಸ್ವತ್ತು. ಕಠಿಣ ಪರಿಶ್ರಮ ಹೊಂದಿದ ವಿದ್ಯಾರ್ಥಿ ಮತ್ತೊಬ್ಬನಿಗೆ ಮಾದರಿಯಾಗುತ್ತಾನೆ. ವಿದ್ಯೆಯಿಂದ ವಿನಯ ಬರಬೇಕೆ ಹೊರತು ಗರ್ವ ಅಲ್ಲ. ಗರ್ವದಿಂದ ಬೀಗುವ ವಿದ್ಯಾರ್ಥಿಯಲ್ಲಿ ಶಾರದೆ ನೆಲೆಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿಗೆ ಅತೀ ಹೆಚ್ಚು ಅಂಕಗಳಿಸಿದ ಆನವಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಯರಾದ ದಿವ್ಯಾ ಕುಣೆತೆಪ್ಪ (ಕಲಾ ವಿಭಾಗ ೫೭೬ ಅಂಕ ಶೇ.೯೬), ಬಿಂದು ಬೆಟ್ಟದಕೂರ್ಲಿ (ವಿಜ್ಞಾನ ವಿಭಾಗ ೫೬೮ ಅಂಕ ಶೇ. ೯೪.೬) ಮತ್ತು ಅನೂಷಾ ತಲಗಡ್ಡೆ (ವಾಣಿಜ್ಯ ವಿಭಾಗ ೫೭೩ ಅಂಕ ಶೇ. ೯೬.೧೬) ಅವರನ್ನು ಸನ್ಮಾನಿಸಲಾಯಿತು.

ಗುರುಕುಲ ವಿದ್ಯಾ ಸಂಸ್ಥೆ ಸತೀಶ್ ಬೈಂದೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಉಮೇಶ್ ಭದ್ರಾಪುರ, ಅಕ್ಕನ ಬಳಗದ ರೇಣುಕಮ್ಮ ಗೌಳಿ, ಯುವ ಬ್ರಿಗೇಡ್ ಸಂಚಾಲಕ ರಂಗನಾಥ ಮೊಘವೀರ, ನೇತ್ರಾವತಿ, ನಿವೃತ್ತ ಶಿಕ್ಷಕ ಸಂಪತ್‌ಕುಮಾರ್, ಮಹೇಶ್ ಖಾರ್ವಿ ಮೊದಲಾದವರು ಹಾಜರಿದ್ದರು.

Share this article