ಬೆಳ್ತಂಗಡಿ ; ವಿಕಸಿತ ಭಾರತ-2047ರ ಗುರಿಯನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರ್ಕಾರ ಹಾಗೂ ವಿವಿಧ ಪಾಲುದಾರರ ಜವಾಬ್ದಾರಿ ಮತ್ತು ಸಹಭಾಗಿತ್ವ ಮಹತ್ವದ ಪಾತ್ರ ವಹಿಸುತ್ತದೆ ಎಂದು ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ವಿಕಸಿತ ಭಾರತ–2047ರ ಗುರಿಯನ್ನು ಸಾಕಾರಗೊಳಿಸುವಲ್ಲಿ ಶಿಕ್ಷಣ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸರ್ಕಾರ ಹಾಗೂ ವಿವಿಧ ಪಾಲುದಾರರ ಜವಾಬ್ದಾರಿ ಮತ್ತು ಸಹಭಾಗಿತ್ವ ಮಹತ್ವದ ಪಾತ್ರ ವಿಚಾರದ ಕುರಿತು ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ‘ಸಂಭ್ರಮ - 2026'''''''''''''''''''''''''''''''' ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಉತ್ತಮ ಆಡಳಿತವೆಂದರೆ ದೇಶದ ಪ್ರತಿಯೊಬ್ಬ ನಾಗರಿಕನ, ಅದರಲ್ಲೂ ಬಡ ಮತ್ತು ದುರ್ಬಲ ವರ್ಗದ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುವುದಾಗಿದೆ ಎಂದರು.ಬೆಂಗಳೂರಿನ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್. ಪ್ರಭಾಕರ್ ಮಾತನಾಡಿ, ಸರ್ಕಾರ ರೂಪಿಸುವ ನೀತಿಗಳು ಮತ್ತು ಅವುಗಳ ಫಲಾನುಭವಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಅಗತ್ಯ ಎಂದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾತನಾಡಿ, ಸಮಾಜದ ದುರ್ಬಲ ವರ್ಗಗಳ ಸಬಲೀಕರಣ ಕುರಿತು ರಾಷ್ಟ್ರೀಯ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮಾತನಾಡಿ, ಶಿಕ್ಷಣ, ಡಿಜಿಟಲ್ ಇಂಡಿಯಾ ಹಾಗೂ ತಂತ್ರಜ್ಞಾನದ ಬೆಳವಣಿಗೆ ದೇಶದ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಒದಗಿಸಿವೆ ಎಂದರು.
ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ಪ್ರದರ್ಶಿಸಲು ರೀಲ್ಸ್ ತಯಾರಿಕೆ, ಸಂಶೋಧನಾ ಪ್ರಬಂಧ ಮಂಡನೆ, ಉತ್ತಮ ಕೌನ್ಸಿಲರ್ , ಉತ್ತಮ ವ್ಯವಸ್ಥಾಪಕ , ಬೀದಿ ನಾಟಕ ಹಾಗೂ ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪಿಜಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಉಪ ಪ್ರಾಚಾರ್ಯ ನಂದ ಕುಮಾರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಕಾಲೇಜಿನ ಚರಿಷ್ಮಾ ಮತ್ತು ತಂಡದವರು ಪ್ರಾರ್ಥಿಸಿದರು. ಡಾ. ಅಕ್ಷತಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಹರ್ಷಿತಾ ಮತ್ತು ರಾಜೇಶ್ ನಿರೂಪಿಸಿ, ಡಾ. ಅಥುಲ್ ಎಸ್ ವಂದಿಸಿದರು. ವಿಭಾಗದ ಮುಖ್ಯಸ್ಥ ಡಾ. ರವಿಶಂಕರ್ ಕಾರ್ಯಕ್ರಮ ಸಂಯೋಜಿಸಿದರು.