ಉತ್ತಮ ಭವಿಷ್ಯಕ್ಕೆ ಶಿಕ್ಷಣ ಒಂದು ಪ್ರಮುಖ ಅಸ್ತ್ರ: ಕೆ.ಪಿ.ಬಾಬು

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ಪಠ್ಯ ವಿಷಯಗಳನ್ನು ಅಂದಂದೇ ಓದಿಕೊಂಡು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲಾ ಆ ವಿಷಯಗಳನ್ನು ಮೆಲುಕು ಹಾಕುತ್ತಿರಬೇಕು. ಇದರಿಂದ ವಿಷಯಗಳು ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿದಿರುತ್ತವೆ. ಕಷ್ಟವೆನಿಸುವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಸಮಯವನ್ನು ಕೊಡಿ. ಅರ್ಥವಾಗುವವರೆಗೆ ಬಿಡದೆ ಓದಬೇಕು. ಗೊಂದಲಗಳು, ಸಮಸ್ಯೆಗಳು ಎದುರಾದರೆ ಶಿಕ್ಷಕರನ್ನು ಕೇಳಿ ಅರ್ಥೈಸಿಕೊಂಡು ಕಲಿಕೆಯಲ್ಲಿ ತೊಡಗಿದಾಗ ವಿಷಯಗಳು ಸರಳ ಮತ್ತು ಸುಲಭವೆನಿಸುತ್ತವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶಿಕ್ಷಣ ಪ್ರಮುಖ ಅಸ್ತ್ರವಾಗಿಸಿಕೊಳ್ಳಬೇಕು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಸಲಹೆ ನೀಡಿದರು.

ನಗರದ ಕೆರೆಯಂಗಳದಲ್ಲಿರುವ ಜೆಎಸ್‌ಎಸ್ ಪಬ್ಲಿಕ್ ಶಾಲೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಅದ್ಭುತ ಗ್ರಹಿಕಾ ಶಕ್ತಿ ಇದೆ. ಎಲ್ಲಾ ವಿಷಯಗಳನ್ನು ಮನನ ಮಾಡಿಕೊಳ್ಳುವ ಸಾಮರ್ಥ್ಯವಿದೆ. ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುವುದನ್ನು ವಿದ್ಯಾರ್ಥಿ ದಿಸೆಯಿಂದಲೇ ರೂಢಿಸಿಕೊಳ್ಳುವಂತೆ ತಿಳಿಸಿದರು.

ಪಠ್ಯ ವಿಷಯಗಳನ್ನು ಅಂದಂದೇ ಓದಿಕೊಂಡು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲಾ ಆ ವಿಷಯಗಳನ್ನು ಮೆಲುಕು ಹಾಕುತ್ತಿರಬೇಕು. ಇದರಿಂದ ವಿಷಯಗಳು ಮನಸ್ಸಿನಲ್ಲಿ ದೀರ್ಘಕಾಲದವರೆಗೆ ಉಳಿದಿರುತ್ತವೆ. ಕಷ್ಟವೆನಿಸುವ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಸಮಯವನ್ನು ಕೊಡಿ. ಅರ್ಥವಾಗುವವರೆಗೆ ಬಿಡದೆ ಓದಬೇಕು. ಗೊಂದಲಗಳು, ಸಮಸ್ಯೆಗಳು ಎದುರಾದರೆ ಶಿಕ್ಷಕರನ್ನು ಕೇಳಿ ಅರ್ಥೈಸಿಕೊಂಡು ಕಲಿಕೆಯಲ್ಲಿ ತೊಡಗಿದಾಗ ವಿಷಯಗಳು ಸರಳ ಮತ್ತು ಸುಲಭವೆನಿಸುತ್ತವೆ ಎಂದರು.

ಓದುವ ವಯಸ್ಸಿನಲ್ಲಿ ಉತ್ತಮವಾಗಿ ಕಲಿತರೆ ಉನ್ನತ ಸ್ಥಾನ-ಮಾನಗಳನ್ನು ಅಲಂಕರಿಸಬಹುದು. ದೀರ್ಘಕಾಲದವರೆಗೆ ಸುಖಮಯ ಜೀವನ ನಡೆಸಬಹುದು. ಇಂದು ನೀಲಿ ಬಣ್ಣದ ಪೆನ್‌ನಲ್ಲಿ ಬರೆಯುವ ಕೈಗಳು ಮುಂದೆ ಉನ್ನತಾಧಿಕಾರಿಯಾಗಿ ಹಸಿರು ಬಣ್ಣದ ಪೆನ್‌ನಲ್ಲಿ ಸಹಿ ಮಾಡುವ ಹಂತಕ್ಕೇರಬಹುದು. ಓದಿನೊಂದಿಗೆ ಸಂಸ್ಕಾರವನ್ನು ರೂಢಿಸಿಕೊಂಡರೆ ವ್ಯಕ್ತಿತ್ವ ವಿಕಸನಗೊಂಡು ಸಮಾಜದ ಗೌರವಕ್ಕೆ ಪಾತ್ರರಾಗುತ್ತೀರಿ. ಇದರಿಂದ ಹೆತ್ತವರಿಗೆ ಮತ್ತು ಓದಿದ ಶಾಲೆಗೂ ಕೀರ್ತಿಯನ್ನು ತಂದಂತಾಗುತ್ತದೆ ಎಂದರು.

ಮಾರ್ಚ್‌ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇರುವುದರಿಂದ ಈಗಿನಿಂದಲೇ ಓದಲು ಆರಂಭಿಸಿ. ಎಷ್ಟು ಗಂಟೆ ಓದುತ್ತೇವೆ ಎನ್ನುವುದಕ್ಕಿಂತ ಓದಿದ ಎಷ್ಟು ಗಂಟೆಯಲ್ಲಿ ಎಷ್ಟು ವಿಷಯಗಳು ಮನನವಾದವು ಎನ್ನುವುದು ಮುಖ್ಯವಾಗಲಿದೆ. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳದೆ ನೀವು ಬೇರೆಯವರಿಗೆ ಮಾದರಿಯಾಗುವ ರೀತಿಯಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಿ. ನಿಮಗೆ ನೀವೇ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಉತ್ತರ ಬರೆಯುವ ಹವ್ಯಾಸ ರೂಢಿಸಿಕೊಳ್ಳಿ. ಹಳೆಯ ಪ್ರಶ್ನೆಪತ್ರಿಕೆಗಳ ಬಗ್ಗೆ ಗಮನಹರಿಸಿ. ಅವುಗಳಲ್ಲಿ ಯಾವುದು ಬಂದಿಲ್ಲ, ಯಾವ ವಿಷಯದ ಪ್ರಶ್ನೆಯನ್ನು ಹೆಚ್ಚುಬಾರಿ ಕೇಳಲಾಗಿದೆ, ಒಂದು ಪ್ರಶ್ನೆಯನ್ನು ಯಾವ ಯಾವ ವಿಧದಲ್ಲಿ ಕೇಳಲಾಗಿದೆ. ಅವುಗಳಿಗೆ ಉತ್ತರಿಸುವುದು ಹೇಗೆ ಎಂಬುದನ್ನೆಲ್ಲಾ ತಿಳಿದುಕೊಂಡರೆ ಪರೀಕ್ಷೆ ಎದುರಿಸುವುದು ಸುಲಭವಾಗಲಿದೆ ಎಂದು ನುಡಿದರು.

ಮೊಬೈಲ್‌ಗಳು ಪಠ್ಯ ವಿಷಯಗಳಿಗೆ ಪೂರಕವಾಗಿ ಕಲಿಕೆಗೆ ಉಪಯೋಗವಾಗುವಂತಿದ್ದರೆ ಒಳ್ಳೆಯದು. ಅನಗತ್ಯವಾಗಿ ಅದನ್ನು ಬಳಸುವುದು ಬೇಡ. ಪರೀಕ್ಷಾ ಕಾಲದಲ್ಲಂತೂ ಅದನ್ನು ದೂರವಿಡುವುದೇ ಉತ್ತಮ. ಇದು ಸ್ಪರ್ಧಾತ್ಮಕ ಯುಗ. ಈ ಹಂತದಲ್ಲಿ ವಿದ್ಯಾರ್ಥಿಗಳು ಎಚ್ಚರ ತಪ್ಪಬಾರದು. ಎಚ್ಚರ ತಪ್ಪಿದರೆ, ಸಮಯ ಹಾಳು ಮಾಡಿಕೊಂಡರೆ ಮುಂದಿನ ಜೀವನ ಕಷ್ಟದಾಯಕವಾಗಲಿದೆ. ಅದಕ್ಕೆ ಅವಕಾಶ ನೀಡದೆ ಗುರಿ ಸಾಧಿಸುವ ಕಡೆ ಗಮನಹರಿಸುವಂತೆ ಸೂಚ್ಯವಾಗಿ ತಿಳಿಸಿದರು.

ಉತ್ತಮ ಆಹಾರವನ್ನು ಸೇವಿಸಿ ಸದಾಕಾಲ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಿ. ಜಂಕ್‌ಫುಡ್, ಫಾಸ್ಟ್‌ಪುಡ್‌ಗಳಿಂದ ದೂರವಿದ್ದು, ಹಣ್ಣು , ಸೊಪ್ಪು, ತರಕಾರಿಯನ್ನು ಹೆಚ್ಚಾಗಿ ಸೇವಿಸಿ. ಯೋಗ, ನಿಯಮಿತ ವ್ಯಾಯಾಮ, ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸು ಲವಲವಿಕೆಯಿಂದ ಇರುತ್ತದೆ. ಕ್ರಿಯಾಶೀಲವಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲೆ ನಿಶಾ ಮಣಿಗಂಡನ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನಹರಿಸಬೇಕು. ಸಂಸ್ಕಾರ, ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡಲು ಹೆತ್ತವರು ಕಷ್ಟಪಡುತ್ತಿರುತ್ತಾರೆ. ಅವರ ಶ್ರಮ ವ್ಯರ್ಥವಾಗಲು ಬಿಡಬಾರದು. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳಾದ ನಿಮ್ಮ ಕರ್ತವ್ಯ ಎಂದು ಬುದ್ಧಿಮಾತು ಹೇಳಿದರು.

ಶಾಲೆಯ ಪರವಾಗಿ ಉಪನ್ಯಾಸ ನೀಡಿದ ಕೆ.ಪಿ.ಬಾಬು ಅವರನ್ನು ಅಭಿನಂದಿಸಲಾಯಿತು. ಶಾಲೆಯ ಶಿಕ್ಷಕ-ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.

Share this article