ಪ್ರಪಂಚದಲ್ಲಿ ಶಿಕ್ಷಣಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ: ಡಾ.ನಿಶ್ಚಲಾನಂದನಾಥಸ್ವಾಮಿ

KannadaprabhaNewsNetwork | Published : Feb 24, 2025 12:31 AM

ಸಾರಾಂಶ

ಮಕ್ಕಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಜತೆಗೆ ಗುರು ಹಿರಿಯರನ್ನು ಗೌರವಿಸುವುದು, ಮಾನವೀಯ ಮೌಲ್ಯ ಹಾಗೂ ಸೇವಾ ಮನೋವವನ್ನು ಜೀವನದಲ್ಲಿ ರೂಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರಪಂಚದಲ್ಲಿ ಶಿಕ್ಷಣಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ ಎಂಬುದನ್ನು ಅರಿತು ಮಕ್ಕಳು ಕಠಿಣ ಪರಿಶ್ರಮದಿಂದ ಓದಿ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಕೊಪ್ಪದಲ್ಲಿ ಶನಿವಾರ ಗ್ರಾಮಾಂತರ ಶಿಕ್ಷಣ ಟ್ರಸ್ಟ್‌ನ ಸರ್.ಎಂ.ವಿ.ಹಿರಿಯ ಪ್ರಾಥಮಿಕ ಶಾಲೆ ಕೊಪ್ಪ, ಚನ್ನೇಗೌಡ ಪ್ರೌಢಶಾಲೆ ಹುರಗಲವಾಡಿ ಗೇಟ್‌ ವತಿಯಿಂದ ಆಯೋಜಿಸಿದ್ದ ಪಾಲಕರ ದಿನಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ಹಾಗೂ ಸಿ.ತಮ್ಮಯ್ಯ ಅವರ 75ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಜತೆಗೆ ಗುರು ಹಿರಿಯರನ್ನು ಗೌರವಿಸುವುದು, ಮಾನವೀಯ ಮೌಲ್ಯ ಹಾಗೂ ಸೇವಾ ಮನೋವವನ್ನು ಜೀವನದಲ್ಲಿ ರೂಡಿಸಿಕೊಂಡು ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎಂದರು.

ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅಗಾಧ ಶಕ್ತಿ ಇದೆ. ಗುಣಾತ್ಮಕ ಶಿಕ್ಷಣ ನೀಡಿದರೆ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದರು.

ಶಿಕ್ಷಕರು ಮತ್ತು ಪಾಲಕರು ಉತ್ತಮ ಮಾರ್ಗದರ್ಶನ ಮತ್ತು ತರಬೇತಿ ನೀಡಿದರೆ ಸುಂದರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಸಂಸ್ಥೆಯೂ ಹಲವು ವರ್ಷಗಳಿಂದ ಗುಣಾತ್ಮಕ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತಿರುವುದು ಪ್ರಶಂಸನೀಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆಯಿತು.

ಗ್ರಾಮಾಂತರ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಸಿ.ತಮ್ಮಯ್ಯ, ಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ಕೆ.ಬಿ.ನಾರಾಯಣ, ನಿರ್ದೇಶಕರಾದ ಪುಟ್ಟಸ್ವಾಮಿ, ಮರೀಗೌಡ, ಮಲ್ಲಿಕಾರ್ಜುನ, ಚನ್ನಮ್ಮ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಗ್ರಾಪಂ ಅಧ್ಯಕ್ಷ ರುದ್ರೇಶ್, ತಾಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ, ಮಾಜಿ ಉಪಾಧ್ಯಕ್ಷರಾದ ಬೆಕ್ಕಳಲೆ ರಘು, ರಾಮಚಂದ್ರು, ಪುರಸಭಾ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿವಾಕರ, ಗುತ್ತಿಗೆದಾರ ಸುರೇಶ್ ಗೌಡ ಇತರರು ಇದ್ದರು.

Share this article