ಕೊಪ್ಪಳ: ಕೊಪ್ಪಳ ಬಳಿ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪನೆ ವಿರೋಧಿಸಿ ಫೆ. 24ರಂದು ಕೊಪ್ಪಳ ತಾಲೂಕು ಪರಿಸರ ಹಿತಕ್ಷಣಾ ವೇದಿಕೆ ಕರೆ ನೀಡಿರುವ ಕೊಪ್ಪಳ ಮತ್ತು ಭಾಗ್ಯನಗರ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ: ಕಾರ್ಖಾನೆ ಸ್ಥಾಪನೆ ವಿರೋಧಿಸಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಪ್ರಗತಿಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಶಾಲಾ ಶಿಕ್ಷಣ ಸಂಸ್ಥೆಗಳು, ಸಹಕಾರಿ ಬ್ಯಾಂಕ್ ಅಸೋಸಿಯೇಶನ್, ವರ್ತಕರ ಸಂಘ, ಎಪಿಎಂಸಿ ಹಮಾಲರ ಸಂಘ, ಕೊಪ್ಪಳ ಜಿಲ್ಲಾ ಹಮಾಲರ ಸಂಘ, ಬಂಡಿ ಹಮಾಲರ ಸಂಘ, ಸವಿತಾ ಸಮಾಜ ಸೇರಿದಂತೆ 100ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಜೈನ್ ಸಮಾಜ, ಅಲ್ಪಸಂಖ್ಯಾತ ಸಮಾಜ, ವೀರಶೈವ ಲಿಂಗಾಯತ ಸಮಾಜ, ವಿವಿಧ ಹಿಂದೂ ಸಮಾಜ, ಅಖಿಲ ಭಾರತ ಲಿಂಗಾಯತ ಮಹಾಸಭಾ ಸೇರಿದಂತೆ 100ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ. ಇದಕ್ಕಿಂತ ಮಿಗಿಲಾಗಿ ಆಟೋ ಮಾಲೀಕರ ಮತ್ತು ಚಾಲಕರ ಸಂಘ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ಸೂಚಿಸಿವೆ.
ಇದೇ ಮೊದಲ ಬಾರಿಗೆ ಪೆಟ್ರೋಲ್ ಬಂಕ್ ಮಾಲೀಕರ ಸಂಘವೂ ಬಂದ್‌ಗೆ ಬೆಂಬಲ ನೀಡಿ, ಬಂಕ್ ಬಂದ್ ಮಾಡುತ್ತಿವೆ.ಮೆರವಣಿಗೆ: ಶ್ರೀ ಗವಿಸಿದ್ಧೇಶ್ವರ ಮಠದ ಆವರಣದಿಂದ ಬೆಳಗ್ಗೆ 9 ಗಂಟೆಗೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಬಳಿಕ ಗಡಿಯಾರ ಕಂಬ, ಅಶೋಕ ವೃತ್ತದ ಮೂಲಕ ಮೆರವಣಿಗೆ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಲಿದೆ.
20 ಸಾವಿರಕ್ಕೂ ಅಧಿಕ ಜನರು ಭಾಗಿ:ಈಗಾಗಲೇ ಘೋಷಿತ ಸಂಘಟನೆಗಳು ಸೇರಿದಂತೆ ಬೆಂಬಲ ನೀಡಿರುವ ಸಮಾಜದ ಸಂಘಟನೆಗಳು ನೀಡಿರುವ ಮಾಹಿತಿಯ ₹ 20 ಸಾವಿರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಆದರೆ, ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ಹೋರಾಟದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಹಾಗೂ ಎಲ್ಲ ಧರ್ಮ ಗುರುಗಳು ಸಹ ಭಾಗಿಯಾಗುತ್ತಿರುವುದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ 50 ಸಾವಿರಕ್ಕೂ ಅಧಿಕವಾಗಲಿದೆ ಎನ್ನುವ ಲೆಕ್ಕಾಚಾರವೂ ಇದೆ.
ಕೊಪ್ಪಳ ಬಂದ್‌ಗೆ ಹಳ್ಳಿ, ನಗರ ಪ್ರದೇಶದಿಂದಲೂ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಿರೀಕ್ಷೆ ಬೆಂಬಲ ವ್ಯಕ್ತವಾಗಿರುವುದರಿಂದ ಬಂದ್ ಯಶಸ್ವಿಯಾಗಲಿದೆ ಎಂದು ಕೊಪ್ಪಳ ತಾಲೂಕು ಪರಿಸರ ಹಿತರಕ್ಷಣಾ ವೇದಿಕೆ ಸಂಚಾಲಕ ಶರಣಪ್ಪ ಸಜ್ಜನ ಹೇಳಿದರು.
ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳೇ ನೇತೃತ್ವ ವಹಿಸಿರುವುದರಿಂದ ಹೋರಾಟಕ್ಕೆ ಆನೆಬಲ ಬಂದಿದ್ದು, ಜತೆಗೆ ಎಲ್ಲ ಧರ್ಮ ಗುರುಗಳು, ಎಲ್ಲ ಪಕ್ಷದವರು ಭಾಗವಹಿಸಿರುವುದು ವಿಶೇಷ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯಸಿ.ವಿ. ಚಂದ್ರಶೇಖರ ಹೇಳಿದರು.