ಧಾರವಾಡ:
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಮಾತನಾಡಿ, ಕುವೆಂಪು ಅವರ ದೃಷ್ಟಿಯಲ್ಲಿ ಮಗು ಹುಟ್ಟಿದಾಗ ಯಾವುದೇ ಜಾತಿ ಅಥವಾ ಧರ್ಮದ ಹಣೆಪಟ್ಟಿ ಹೊತ್ತು ಬರುವುದಿಲ್ಲ. ಅದು ಕೇವಲ ಒಂದು ಜೀವಿಯಾಗಿ, ವಿಶ್ವಮಾನವನಾಗಿ ಭೂಮಿಗೆ ಬರುತ್ತದೆ. ಆದರೆ ಸಮಾಜವು ಮಗುವಿಗೆ ಭಾಷೆ, ಧರ್ಮ ಮತ್ತು ಪಂಗಡಗಳ ಬೇಲಿಯನ್ನು ಹಾಕುತ್ತದೆ ಎಂದರು.
ನಾವು ಮಗುವನ್ನು ಮತ್ತೆ ವಿಶ್ವಮಾನವನನ್ನಾಗಿ ಮಾಡುವ ಶಿಕ್ಷಣ ನೀಡಬೇಕಿದೆ. ಕುವೆಂಪು ಅವರ ಓ ನನ್ನ ಚೇತನ, ಆಗು ನೀ ಅನಿಕೇತನ ಎಂಬ ಸಾಲುಗಳು ನಮ್ಮ ಮನಸ್ಸಿನ ಎಲ್ಲ ಸಂಕುಚಿತ ಭಾವನೆಗಳನ್ನು ತೊಡೆದುಹಾಕಿ, ವಿಶಾಲ ಮನೋಭಾವ ಬೆಳೆಸಿಕೊಳ್ಳಲು ಪ್ರೇರಣೆಯಾಗಿವೆ ಎಂದು ಹೇಳಿದರು. ಆಲೂರು ವೆಂಕಟರಾವ ಟ್ರಸ್ಟ್ ಅಧ್ಯಕ್ಷ ರಂಜಾನ್ ದರ್ಗಾ ಮಾತನಾಡಿ, ಇಂದಿನ ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳು ಆತಂಕಕಾರಿಯಾಗಿವೆ. ಕುವೆಂಪು ಅವರು ಅಂದೇ ಜಲಗಾರ ಮತ್ತು ಶೂದ್ರ ತಪಸ್ವಿ ಕೃತಿಗಳ ಮೂಲಕ ಜಾತಿ ವ್ಯವಸ್ಥೆಯ ಅಟ್ಟಹಾಸವನ್ನು ಪ್ರಶ್ನಿಸಿದ್ದರು ಮತ್ತು ನಾವು ಕುವೆಂಪು ಅವರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಕುವೆಂಪು ಅವರ ವಿಶ್ವಮಾನವ ದಿನಾಚರಣೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಕಾಮಣಿ ನಿರೂಪಿಸಿದರು.