ಶಿಕ್ಷಣ ಅಂಕಗಳಿಕೆ ಮಾರ್ಗವಲ್ಲ, ವ್ಯಕ್ತಿತ್ವದ ಕೈಗನ್ನಡಿ: ಮಹೇಶ ಮಾಶಾಳ

KannadaprabhaNewsNetwork | Published : Jul 2, 2025 12:20 AM
1ಡಿಡಬ್ಲೂಡಿ6ಜೆಎಸೆಸ್ ಸನ್ನಿಧಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತವು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಹೇಶ ಮಾಶಾಳ ಮಾತನಾಡಿದರು.  | Kannada Prabha

ಸಾರಾಂಶ

ಶಿಕ್ಷಕರಾದವರು ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಣೆ ಮಾಡುವ ಸವಾಲು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಲೆಯಲ್ಲಿ ಕಲಿಸುವ ಹುಚ್ಚು ಮತ್ತು ಎದೆಯಲ್ಲಿ ಸಾಧನೆಯ ಕಿಚ್ಚಿಟ್ಟುಕೊಂಡು ಪ್ರಾಮಾಣಿಕವಾಗಿ ಮುನ್ನುಗ್ಗಿದರೆ ಮಕ್ಕಳ ಮೂಲಕ ಯಶಸ್ಸುಗಳಿಸಲು ಸಾಧ್ಯ.

ಧಾರವಾಡ: ಶಿಕ್ಷಣವು ಮನುಷ್ಯನಲ್ಲಿ ಅಡಗಿರುವ ಶಕ್ತಿಯನ್ನು ಬಡಿದೆಬ್ಬಿಸುತ್ತದೆ. ಅದು ಕೇವಲ ಅಂಕ ಗಳಿಕೆಯ ಮಾರ್ಗವಲ್ಲ, ಬದಲಾಗಿ ವ್ಯಕ್ತಿತ್ವದ ಕೈಗನ್ನಡಿ. ಶಿಕ್ಷಕರು ವಿದ್ಯಾಥಿಗಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ಮಾಡುವುದು ಅವಶ್ಯಕ ಎಂದು ಮೈಂಡ್‌ಸೆಟ್ ತರಬೇತುದಾರ ಹಾಗೂ ಚಿಂತಕ ಮಹೇಶ ಮಾಶಾಳ ಹೇಳಿದರು.

ನಗರದ ಜೆಎಸೆಸ್ ಸನ್ನಿಧಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತವು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬದಲಾವಣೆಯ ಶಿಕ್ಷಣ; ಭವಿಷ್ಯದ ನಿರ್ಮಾಣ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರಾದವರು ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಣೆ ಮಾಡುವ ಸವಾಲು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಲೆಯಲ್ಲಿ ಕಲಿಸುವ ಹುಚ್ಚು ಮತ್ತು ಎದೆಯಲ್ಲಿ ಸಾಧನೆಯ ಕಿಚ್ಚಿಟ್ಟುಕೊಂಡು ಪ್ರಾಮಾಣಿಕವಾಗಿ ಮುನ್ನುಗ್ಗಿದರೆ ಮಕ್ಕಳ ಮೂಲಕ ಯಶಸ್ಸುಗಳಿಸಲು ಸಾಧ್ಯ ಎಂದರು.

ಪ್ರತಿಯೊಬ್ಬರಿಗೂ ಕಣ್ಣೀರು, ಬಡತನ, ಅವಮಾನ ಮತ್ತು ಸೋಲು ಎಂಬುದು ಜೀವನದ ಪಾಠ ಕಲಿಸುತ್ತವೆ. ಮುಂದೆ ಒಂದು ದಿನ ಸಾಧನೆಗೆ ಪೂರಕವಾಗುತ್ತದೆ. ಗುರುಕುಲ ಶಿಕ್ಷಣ ಪದ್ಧತಿಯಲ್ಲಿರುವ ಉತ್ತಮ ಆದರ್ಶ ಮೌಲ್ಯಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯನ ಆಲೋಚನೆ ಅನುಗುಣವಾಗಿ ವ್ಯಕ್ತಿ, ವ್ಯಕ್ತಿತ್ವ ಮಾರ್ಪಾಡು ಆಗಿರುತ್ತದೆ. ಅದನ್ನು ಸರಿಯಾಗಿ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ. ಗುರುವಿನ ಮೌಲ್ಯಗಳು ಸಮಾಜದಲ್ಲಿ ಕಡಿಮೆಯಾಗದಂತೆ ಎಚ್ಚರ ವಹಿಸಿ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯುವಂತಹ ಶಿಕ್ಷಣವನ್ನು ನೀಡಬೇಕು ಎಂದರು.

ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಶಾಲೆಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಗಳು ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬಹುದು. ಇದು ಶಾಲೆಯ ಫಲಿತಾಂಶ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉತ್ತಮ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಕನಸುಗಳಿಗೆ ಶಿಕ್ಷಕರು ದಾರಿದೀಪವಾಗಿ ಕೆಲಸ ಮಾಡಬೇಕು. ಮಕ್ಕಳ ಉತ್ತಮ ಫಲಿತಾಂಶ ದೇಶದ ಭವಿಷ್ಯ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ನಾವೆಲ್ಲರೂ ಪ್ರಯತ್ನ ಮಾಡಿ, ಮಿಷನ್ ವಿದ್ಯಾಕಾಶಿ ಯಶಸ್ವಿಗೆ ಪ್ರಯತ್ನಿಸೋಣ ಎಂದರು.

ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರ ಸಂಘ, ಶಿಕ್ಷಕರ ಸಂಘದ ಪ್ರಮುಖರು ಇದ್ದರು. ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರಧಾನ ಗುರುಗಳು, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಪಾಲ್ಗೊಂಡಿದ್ದರು.

PREV