ಗಾಯನದಲ್ಲಿ ಸ್ವರ ಹಚ್ಚುವುದು ಬಹಳ ಪ್ರಾಮುಖ್ಯ. ಅತ್ಯುತ್ತಮ ಗುರುವಿನಿಂದ ಕಲಿಕೆಯಾದಾಗ ಮಾತ್ರ ಉತ್ತಮ ಸ್ವರ ಹಚ್ಚುವ ಮೂಲಕ ಶ್ರೇಷ್ಠ ಗಾಯಕರಾಗಲು ಸಾಧ್ಯ.
ಧಾರವಾಡ:
ಗಾಯನದಲ್ಲಿ ಸ್ವರ ಹಚ್ಚುವುದು ಬಹಳ ಪ್ರಾಮುಖ್ಯ. ಅತ್ಯುತ್ತಮ ಗುರುವಿನಿಂದ ಕಲಿಕೆಯಾದಾಗ ಮಾತ್ರ ಉತ್ತಮ ಸ್ವರ ಹಚ್ಚುವ ಮೂಲಕ ಶ್ರೇಷ್ಠ ಗಾಯಕರಾಗಲು ಸಾಧ್ಯ. ಯುವ ಕಲಾವಿದರು ಕಾರ್ಯಕ್ರಮಗಳ ಬೆನ್ನು ಹತ್ತಬಾರದು, ಸಿದ್ಧಿಯ ಬೆನ್ನು ಹತ್ತಿದರೆ ಪ್ರಸಿದ್ಧಿ ತಾನಾಗಿಯೇ ಬರುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಯಕ ಪಂ. ಎಂ. ವೆಂಕಟೇಶಕುಮಾರ ಹೇಳಿದರು.
ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಇನ್ಫೋಸಿಸ್ ಫೌಂಡೇಶನ್ ಜತೆಗೂಡಿ ಸಾಧನಕೇರಿಯ ಡಾ. ದ.ರಾ. ಬೇಂದ್ರೆ ಭವನದಲ್ಲಿ ಏರ್ಪಡಿಸಿದ್ದ “ರಿಯಾಜ್ ಮಂತ್ರ” ಹಿಂದೂಸ್ತಾನಿ ಸಂಗೀತ ಕಾರ್ಯಾಗಾರ ಉದ್ಘಾಟಿಸಿದ ಅವರು, ಸಿದ್ಧಿ ಸಾಧನೆಯಾಗಬೇಕಾದರೆ ರಿಯಾಜ್ ಮುಖ್ಯ. ಶ್ರದ್ಧೆ, ಪರಿಶ್ರಮದಿಂದ ಹಲವು ವರ್ಷಗಳ ರಿಯಾಜ್ ನಂತರ ಸಂಗೀತದ ಕಲಿಕೆಯಲ್ಲಿ ಪಕ್ವವಾಗಿ, ಪ್ರೌಢ ಗಾಯನ ಆರಂಭವಾಗುತ್ತದೆ ಎಂದರು.
ಕೇವಲ ವಿದ್ಯೆ ಇದ್ದರೆ ಸಾಲದು, ಅದರಲ್ಲಿ ಕೌಶಲ್ಯ-ತಂತ್ರಗಾರಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಇಂತಹ ಹಿಂದೂಸ್ತಾನಿ ಕಾರ್ಯಾಗಾರಗಳು ಪ್ರಮುಖವಾಗಿವೆ. ಯುವ ಕಲಾವಿದರು ಸಿಕ್ಕ ಸಮಯಾವಕಾಶವನ್ನು ಸದುಪಯೋಗ ಪಡಿಸಿಕೊಂಡು ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಮುಂದುವರಿಸುವಲ್ಲಿ ಹೆಜ್ಜೆ ಹಾಕಲಿ ಎಂದರು.
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಕುಮಾರ ಫಕೀರೇಶ ಅಗಡಿ, ಸಂಗೀತ ಕ್ಷೇತ್ರವು ದೊಡ್ಡ ಸಾಗರವಿದ್ದಂತೆ. ಅದರನ್ನು ಅರಿಯುವುದು ಬಹಳ ಕ್ಲೀಷ್ಟಕರ. ಸಂಗೀತ ಕಾರ್ಯಾಗಾರಗಳು ಸಂಗೀತ ಕಲಿಕೆಗೆ ಬಹಳ ಪೂರಕವಾಗಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ ಮಾತನಾಡಿದರು. ಖ್ಯಾತ ಗಾಯಕಿ ಭಾಗ್ಯಶ್ರೀ ದೇಶಪಾಂಡೆ ವಿವಿಧ ಆಯಾಮಗಳ ಗಾಯನ ತರಬೇತಿ ಹಾಗೂ ಸಂಗೀತ ಪ್ರಸ್ತುತಿಯ ಕುರಿತು ಒಳನೋಟ ಮತ್ತು ಸಮೃದ್ಧ ಅನುಭವ ನೀಡಿದರು. ಇದೇ ವೇಳೆ “ಜಾಗ್ ಉಠೋ ನಂದಲಾಲಾ” ಎಂಬ ಬಂದಿಶ್‌ನ್ನು ಕಲಿಸಿಕೊಡುತ್ತ, ಅದರ ಸಂಗೀತದ ಸೂಕ್ಷ್ಮತೆ, ಭಾವ ಮತ್ತು ಪ್ರಸ್ತುತಿಯ ವಿವಿಧ ಆಯಾಮಗಳ ಕುರಿತು ಅಮೂಲ್ಯ ಮಾರ್ಗದರ್ಶನ ನೀಡಿದರು. ಅಭಂಗದ ಅರ್ಥ, ಆಶಯ, ಸಾರ ಮತ್ತು ಗಾಯನ ಶೈಲಿ ಕುರಿತು ಚರ್ಚಿಸಲಾಯಿತು. ತಬಲಾದಲ್ಲಿ ವಾದಿರಾಜ ದಂಡಾಪೂರ ಹಾಗೂ ಹಾರ್ಮೊನಿಯಂದಲ್ಲಿ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು. ರವಿ ಕುಲಕರ್ಣಿ ನಿರೂಪಿಸಿದರು, ನಾಗರತ್ನಾ ಕುಂಬಾರ ಪ್ರಾರ್ಥಿಸಿದರು, ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಹಿರಿಯ ತಾಂತ್ರಿಕ ವ್ಯವಸ್ಥಾಪಕ ಶಿವಾನಂದ ಕೂಡ್ಲಮಠ ಪ್ರಾಸ್ತಾವಿಕ ಮಾತನಾಡಿದರು, ರಾಘವೇಂದ್ರ ನಾಕೋಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.