ವಿದ್ಯೆ ಕೇವಲ ಲೌಕಿಕ ಜ್ಞಾನವಲ್ಲ, ಸಾಧನೆ: ನಿರ್ಮಲಾನಂದನಾಥ ಶ್ರೀ

KannadaprabhaNewsNetwork |  
Published : Aug 14, 2026, 01:30 AM IST
13ಕೆಎಂಎನ್ ಡಿ30 | Kannada Prabha

ಸಾರಾಂಶ

ತಂದೆ ತಾಯಿ, ಗುರುಗಳು ಮತ್ತು ಸಮಾಜವನ್ನು ಗೌರವಿಸುವುದು ವಿದ್ಯಾರ್ಥಿ ಹಾಗೂ ಸಾಧಕನ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ವಿದ್ಯೆ, ಯಶಸ್ಸು, ಬಲ ಮತ್ತು ಜ್ಞಾನವೆಂಬ ನಾಲ್ಕು ಅಂಶಗಳನ್ನು ಪಾಲಿಸಬೇಕು. ವಿದ್ಯೆ ಕೇವಲ ಲೌಕಿಕ ಜ್ಞಾನವಲ್ಲ, ಬದಲಿಗೆ ಮುಕ್ತಿಯನ್ನು ಪಡೆಯಲು ನಿಜವಾದ ಸಾಧನವಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯೆ, ಯಶಸ್ಸು, ಶಕ್ತಿ ಮತ್ತು ಜ್ಞಾನ ಪಡೆಯುವ ವ್ಯಕ್ತಿ ಸಮಾಜಕ್ಕೆ ವಿಶಿಷ್ಟ ಕೊಡುಗೆ ನೀಡಬಲ್ಲ ಸಾಮರ್ಥ್ಯವಂತನಾಗುತ್ತಾನೆ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ವಿವಿ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ನಡೆದ 6ನೇ ಘಟಿಕೋತ್ಸವದಲ್ಲಿ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ನಂತರ ಆಶೀರ್ವಚನ ನೀಡಿದರು.

ಉನ್ನತ ವ್ಯಾಸಂಗ ಮಾಡಿ ಪದವಿ ಪಡೆಯುವ ಯುವ ಜನರು ಸ್ವಾರ್ಥ ಬಿಟ್ಟು ಪೋಷಕರು, ಹಿರಿಯರು ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ನಿಜವಾದ ಜೀವನ ಕಂಡುಕೊಳ್ಳಲು ಸಾಧ್ಯ. ಹಾಗಾಗಿ ಸಾಧನೆ ಗುರಿಯೊಂದಿಗೆ ಮಹತ್ವದ ಕನಸು ಕಾಣಬೇಕು ಎಂದರು.

ತಂದೆ ತಾಯಿ, ಗುರುಗಳು ಮತ್ತು ಸಮಾಜವನ್ನು ಗೌರವಿಸುವುದು ವಿದ್ಯಾರ್ಥಿ ಹಾಗೂ ಸಾಧಕನ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ವಿದ್ಯೆ, ಯಶಸ್ಸು, ಬಲ ಮತ್ತು ಜ್ಞಾನವೆಂಬ ನಾಲ್ಕು ಅಂಶಗಳನ್ನು ಪಾಲಿಸಬೇಕು. ವಿದ್ಯೆ ಕೇವಲ ಲೌಕಿಕ ಜ್ಞಾನವಲ್ಲ, ಬದಲಿಗೆ ಮುಕ್ತಿಯನ್ನು ಪಡೆಯಲು ನಿಜವಾದ ಸಾಧನವಾಗಿದೆ. ತಮ್ಮಲ್ಲಿರುವ ಜ್ಞಾನವನ್ನು ಅಡಿಪಾಯವಾಗಿಟ್ಟುಕೊಂಡರೆ ಖಂಡಿತ ಯಶಸ್ಸು ಸಿಗುತ್ತದೆ ಎಂದರು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ನಾನು ಬಹು ಸಮಯವನ್ನು ನ್ಯಾಯಾಲಯದಲ್ಲಿ ಕಳೆದು ಸಾಕ್ಷಿಗಳನ್ನು ಪರಿಶೀಲಿಸಿ ವಾದಗಳನ್ನು ಪರೀಕ್ಷಿಸಿ ಅಂತಿಮವಾಗಿ ಒಂದೇ ಉತ್ತರ ಹುಡುಕುವ ವ್ಯಕ್ತಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಆ ಉತ್ತರವು ನೀವು ಪಡೆಯುವ ಪದವಿಗಿಂತ ಬಹು ದೊಡ್ಡದು ಎಂಬುದು ಮುಖ್ಯವಾಗಿದೆ ಎಂದರು.

ಆದಿಚುಂಚನಗಿರಿ ವಿವಿ ಕೇವಲ ಉಪನ್ಯಾಸ ಕೊಠಡಿ ಕಲ್ಪನೆಯಲ್ಲಿ ಪ್ರಾರಂಭವಾಗಿಲ್ಲ. ಆಧ್ಯಾತ್ಮಿಕ ಪರಂಪರೆಯ ವಿಶಿಷ್ಟ ಸಂಕಲ್ಪದಿಂದ ಆರಂಭಗೊಂಡಿದೆ. ಸ್ಟ್ಯಾನ್ ಫೋರ್ಡ್ ವಿವಿ ಸಮೀಕ್ಷೆ ಪ್ರಕಾರ ಇಲ್ಲಿನ ಕೆಲವು ಅಧ್ಯಾಪಕರು ವಿಶ್ವದ ಅಗ್ರಮಾನ್ಯ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದು ಹೆಗ್ಗಳಿಕೆಯ ವಿಚಾರ ಎಂದು ಶ್ಲಾಘಿಸಿದರು.

ಡಾ.ಅಂಬೇಡ್ಕರ್ ಮಾತಿನಂತೆ ಯಾವುದೇ ಸಮಾಜದ ಪ್ರಗತಿ ಅಲ್ಲಿನ ಶಿಕ್ಷಣದ ಪ್ರಗತಿಯ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮನ್ನು ನೀವು ಕಂಡುಕೊಳ್ಳಲು ಮಹತ್ವಕಾಂಕ್ಷೆಯು ಸಮಾಜ ಸೇವೆಯ ಅತ್ಯಂತ ಪರಿಣಾಮಕಾರಿ ಸಾಧನ ಎಂಬುದನ್ನು ಮಹಾತ್ಮ ಗಾಂಧೀಜಿಯವರು ತಿಳಿಸಿದ್ದಾರೆ. ಅದರಂತೆ ಈ ಸಂಸ್ಥೆಯು ನಿಮಗೆ ಸಂಸ್ಕಾರಯುತ ಶಿಕ್ಷಣ, ವಿಶೇಷ ಜ್ಞಾನ ಮತ್ತು ಕೌಶಲ್ಯಗಳನ್ನು ನೀಡಿದೆ. ಈ ಪರಂಪರೆಯಲ್ಲಿ ಜಗತ್ತಿಗೆ ಸೇವೆ ಸಲ್ಲಿಸುವ ಶ್ರೇಷ್ಠ ಕರ್ತವ್ಯ ನಿಮ್ಮದಾಗಿದೆ ಎಂದರು.

ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಡಾ.ನಾಗಹನುಮಯ್ಯ ಮಾತನಾಡಿ, ಘಟಿಕೋತ್ಸವವು ಕೇವಲ ಪದವಿ ಸ್ವೀಕಾರ ಸಮಾರಂಭವಲ್ಲ. ಹಲವು ವರ್ಷಗಳ ಕಲಿಕೆ, ಪರಿಶ್ರಮ, ಬೆಳವಣಿಗೆಯ ಮಹತ್ವದ ಘಟ್ಟ. ಇಲ್ಲಿಂದ ನಿಮ್ಮ ಜೀವನದ ಹೊಸ ಪಯಣ, ಅಧ್ಯಾಯ ಆರಂಭವಾಗುತ್ತಿದೆ. ತರಗತಿ ಕೊಠಡಿ, ಪ್ರಯೋಗಾಲಯಗಳನ್ನು ದಾಟಿ ಹೊರ ಜಗತ್ತಿಗೆ ಕಾಲಿಟ್ಟಾಗ ಏನು ಕಲಿತಿದ್ದೀರಿ ಎಂಬುದಕ್ಕಿಂತ ಕಲಿತ ಜ್ಞಾನವನ್ನು ಎಷ್ಟು ಬಳಸಿಕೊಳ್ಳುತ್ತೀರಿ ಎಂಬುದೇ ಶಿಕ್ಷಣದ ನಿಜವಾದ ಪರಿಕಲ್ಪನೆಯಾಗಿದೆ ಎಂದರು.

ವಿವಿ ಕುಲಪತಿ ಡಾ.ಎಸ್.ಎನ್.ಶ್ರೀಧರ ಶ್ರೀಮಠ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ವಿವಿ ಸಾಧನೆಗಳ ವಾರ್ಷಿಕ ವರದಿಸ ವಿದ್ಯಾರ್ಥಿ ಸಾಧಕರ ಕುರಿತು ವಿವರಿಸಿದರು. ಇದೇ ವೇಳೆ 31 ಪಿಎಚ್‌.ಡಿ ಸಂಶೋಧಕರಿಗೆ ಡಾಕ್ಟರೇಟ್ ಪದವಿ, 31 ಚಿನ್ನದ ಪದಕ ವಿಜೇತ ಸಾಧಕರು, 161 ರ್‍ಯಾಂಕ್ ವಿಜೇತರು, ವೈದ್ಯಕೀಯ, ಇಂಜಿನಿಯರಿಂಗ್, ಔಷಧ ವಿಜ್ಞಾನ, ಬಿ.ಇಡಿ, ನಸಿಂಗ್ ಸೇರಿದಂತೆ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ಒಟ್ಟು 1841 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ಮೌಲ್ಯಮಾಪನ ಕುಲಸಚಿವ ಡಾ.ನಾಗರಾಜ್, ವಿವಿಧ ವಿಭಾಗಗಳ ಡೀನ್‌ಗಳಾದ ಡಾ.ಬಿ.ರಮೇಶ್, ಡಾ.ಕೆ.ಎಸ್.ಗಂಗಾಧರ, ಡಾ.ಎ.ಟಿ.ಶಿವರಾಮು, ಡಾ.ಬಿ.ಎಂ.ಶೋಭಾ, ಡಾ.ಎಂ.ಜಗದೀಶ್, ಡಾ.ಪ್ರಶಾಂತ್ ಕಾಳಪ್ಪ, ಡಾ.ಎಚ್.ಕೋಮಲ, ಹಣಕಾಸು ಅಧಿಕಾರಿ ಬಿ.ಕೆ.ಉಮೇಶ್, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮತ್ತು ಶೈಕ್ಷಣಿಕ ಮಂಡಳಿಗಳ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪೋಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ರಿವರ್ಣಮಯವಾಗಿ ಕಂಗೊಳಿಸಿದ ಬಳ್ಳಾರಿ ನಗರ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿ ರಾಜು: ಕುರಡಗಿ