ಕನ್ನಡಪ್ರಭ ವಾರ್ತೆ ಮದ್ದೂರು
ಬ್ಯಾಂಕ್‌ಗಳು, ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಬೆಳಗ್ಗೆ ವರ್ತಕರು ಮತ್ತು ಹೋಟೆಲ್ ಮಾಲೀಕರು ತಮ್ಮ ವ್ಯಾಪಾರ-ವಹಿವಾಟುಗಳನ್ನು ಪ್ರಾರಂಭಿಸಿದ್ದರು. ರೈತ ಸಂಘ ಮತ್ತು ಕಜವೇ ಮುಖಂಡರು ಬೈಕ್ ರ್‍ಯಾಲಿ ನಡೆಸುವ ಮೂಲಕ ವರ್ತಕರ ಮನವೊಲಿಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನಂತರ ಪ್ರವಾಸಿ ಮಂದಿರ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಕೆಲಕಾಲರಸ್ತೆ ತಡೆ ನಡೆಸಿ ವಾಹನಗಳ ಸಂಚಾರಕ್ಕೆ ಪಡಿಸಿದರು. ಈ ವೇಳೆ ರೈತ ಸಂಘದ ಮುಖಂಡ ಸೋ.ಶಿ.ಪ್ರಕಾಶ್ ಮಾತನಾಡಿ, ಸಂಕಷ್ಟ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಸಮಿತಿ ನೀಡಿರುವ ಆದೇಶ ಅವೈಜ್ಞಾನಿಕವಾಗಿದೆ. ನೀರಿನ ಸಮಸ್ಯೆ ಬಗ್ಗೆ ಸರ್ಕಾರ ಪ್ರಾಧಿಕಾರಕ್ಕೆ ಮನವರಿಕೆ ಮಾಡಿ ಕೊಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.ಕಜವೇ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ನೀರು ಬಿಡುವಂತೆ ಆದೇಶ ನೀಡುತ್ತಿರುವುದು ಕಾವೇರಿ ಕೊಳ್ಳದ ರೈತರಿಗೆ ಮರಣ ಶಾಸನವಾಗಿದೆ. ಮುಂದಿನ ದಿನಗಳಲ್ಲಿ ರೈತರು ಕೃಷಿ ತ್ಯಜಿಸಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.