ಶಿಕ್ಷಣವೇ ನಾಗರಿಕತೆಯ ಮೂಲಬುನಾದಿ: ಮಲ್ಲಿಕಾರ್ಜುನ ಶ್ರೀ

KannadaprabhaNewsNetwork |  
Published : Jun 29, 2026, 02:30 AM IST
ಸಿದ್ದಾಪುರದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ನಿರ್ಮಾಣಗೊಂಡ ಸಭಾಭವನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪ್ರತಿಯೊಂದು ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಅಭಿವೃದ್ಧಿಪಡಿಸುವುದೇ ಮಠ-ಮಂದಿರಗಳ ಮುಖ್ಯ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಪ್ರತಿಯೊಂದು ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕವಾಗಿ ಅಭಿವೃದ್ಧಿಪಡಿಸುವುದೇ ಮಠ-ಮಂದಿರಗಳ ಮುಖ್ಯ ಉದ್ದೇಶವಾಗಿದೆ. ಕರ್ನಾಟಕದ ಮಟ್ಟಿಗೆ ಶಿಕ್ಷಣ ಮತ್ತು ವಿಚಾರ ಕ್ರಾಂತಿಯಲ್ಲಿ ಮಠಗಳು ಸರ್ಕಾರದ ಸಮನಾಂತರವಾಗಿ ಕೆಲಸ ಮಾಡಿದ ಇತಿಹಾಸ ಹೊಂದಿವೆ ಎಂದು ಶಿರಸಿ ರುದ್ರದೇವರ ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ನಿರ್ಮಾಣಗೊಂಡ ಸಭಾಭವನ ಉದ್ಘಾಟನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸಿದ್ದಗಂಗಾ ಮಠದಂತಹ ಧಾರ್ಮಿಕ ಕೇಂದ್ರಗಳು ಪ್ರತಿದಿನ ಹತ್ತಾರು ಸಾವಿರ ಮಕ್ಕಳಿಗೆ ಅನ್ನ ಹಾಗೂ ಜ್ಞಾನದಾಸೋಹ ನೀಡುತ್ತಿವೆ. ಸಂವಿಧಾನದ ಆಶಯಗಳಂತೆ ವ್ಯಕ್ತಿಗೆ ಏನನ್ನು ನೀಡದಿದ್ದರೂ ಶಿಕ್ಷಣ ನೀಡಬೇಕು. ಏಕೆಂದರೆ ಶಿಕ್ಷಣವೇ ನಾಗರಿಕತೆಯ ಮೂಲಬುನಾದಿಯಾಗಿದೆ. ಇವತ್ತಿನ ದಿನಗಳಲ್ಲಿ ಸೌಲಭ್ಯಗಳು ಹೆಚ್ಚಾಗುತ್ತಿದ್ದರೂ, ಶಿಕ್ಷಣ ಹಾಗೂ ಜ್ಞಾನದ ಮಟ್ಟ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದರು.

ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, ಸನಾತನ ಧರ್ಮದ ರಕ್ಷಣೆ ಹಾಗೂ ಪ್ರತಿಯೊಂದು ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯೇ ನಮ್ಮ ಮುಖ್ಯ ಧ್ಯೇಯವಾಗಿದೆ. ಕೇವಲ ಶಾಸಕರಷ್ಟೇ ಅಲ್ಲದೆ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗಿನ ಪ್ರತಿಯೊಬ್ಬ ಚುನಾಯಿತ ಸದಸ್ಯನೂ ಸರ್ಕಾರದ ಹಣವನ್ನು ತಂದು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಸಾರ್ಥಕಗೊಳ್ಳುತ್ತದೆ. ಪ್ರತಿಭಾವಂತ ಮಕ್ಕಳನ್ನು ಗೌರವಿಸುವುದು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡುವುದು ತಾಯಂದಿರ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ದೇಶದ ಅಭಿವೃದ್ಧಿ, ಭದ್ರತೆ, ಸಮಾನತೆ ಮತ್ತು ನೆಮ್ಮದಿಯ ಬದುಕಿಗೆ ಶಿಕ್ಷಣವೇ ಏಕೈಕ ಮಾರ್ಗವಾಗಿದೆ ಎಂದರು.

ಮಾಜಿ ಶಾಸಕ ಹಾಗೂ ಅ.ಭಾ ವೀ.ಮಹಾಸಭಾದ ಜಿಲ್ಲಾಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, ಇಂದು ಸಮಾಜವು ಉಪಪಂಗಡಗಳಿಂದ ಒಡೆಯುತ್ತಿದ್ದು, ಒಗ್ಗಟ್ಟಾಗಿದ್ದಾಗ ಮಾತ್ರ ಸಮಾಜದ ಏಳ್ಗೆ ಸಾಧ್ಯ. ಇತರ ಸಮಾಜದೊಂದಿಗೆ ಅನ್ಯೋನ್ಯತೆ ಹೊಂದಿ ನಾವೂ ಬೆಳೆಯೋಣ ಎಂದರು.

ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಅತಿಥಿಗಳಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ, ಜಿಲ್ಲಾ ಘಟಕದ ಉಪಾಧ್ಯಕ್ಷೆ ತನುಜಾ ಪ್ರಕಾಶ್ ಪಾಟೀಲ್, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಜ್ಯೋತಿ ಮುಕ್ತೇಶ್ ಗೌಡ ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೊಹಮ್ಮದ್ ಯಾಕೂಬ್ ಶೇಕ್, ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ನಾಗರಾಜ ಎಂ. ದೋಶೆಟ್ಟಿ ಉಪಸ್ಥಿತರಿದ್ದರು.

ನೂತನ ಸಭಾಭವನದ ಗುತ್ತಿಗೆದಾರರಾದ ಸತೀಶ ಗೌಡರ್, ವಸಂತ ನಾಯ್ಕ ಹಾಗೂ ಭರಮಣ್ಣ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಶಂಭುಲಿಂಗ ಸ್ವಾಮಿ ವೇದಘೋಷ ಮಾಡಿದರು. ಅರುಂಧತಿ ದೋಶೆಟ್ಟಿ ಪ್ರಾರ್ಥಿಸಿದರು. ಕುಮಾರ್ ಗೌಡರ್ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಾರಂಗ 100ನೇ ಮನೆ ಶತಸ್ಕೃತಿ ಹಸ್ತಾಂತರ
ಆರೋಗ್ಯವಂತ ಮಕ್ಕಳು ಭವಿಷ್ಯದ ನಾಯಕರು: ಯಶ್ ಪಾಲ್